ADVERTISEMENT

ಡಿ.ಜೆ. ಹಳ್ಳಿ ಗಲಭೆ ಸಂಘಟಿತ, ಪೂರ್ವ ಯೋಜಿತ: ಸತ್ಯಶೋಧನಾ ಸಮಿತಿ ವರದಿ

ಸಿಎಂಗೆ ‘ಸಿಟಿಜನ್ ಫಾರ್‌ ಡೆಮಾಕ್ರಸಿ’ ಸತ್ಯಶೋಧನೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 10:57 IST
Last Updated 4 ಸೆಪ್ಟೆಂಬರ್ 2020, 10:57 IST
ಡಿ.ಜೆ. ಹಳ್ಳಿ ಗಲಭೆ ಸಂದರ್ಭದ ಚಿತ್ರ (ಪ್ರಜಾವಾಣಿ ಸಂಗ್ರಹ)
ಡಿ.ಜೆ. ಹಳ್ಳಿ ಗಲಭೆ ಸಂದರ್ಭದ ಚಿತ್ರ (ಪ್ರಜಾವಾಣಿ ಸಂಗ್ರಹ)   

ಬೆಂಗಳೂರು: ‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿರುವ ನಡೆದಿರುವ ಗಲಭೆ ಪೂರ್ವ ಯೋಜಿತ ಮತ್ತು ಸಂಘಟಿತವಾಗಿದ್ದು, ಹಿಂದುಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ‘ಸಿಟಿಜನ್ ಫಾರ್‌ ಡೆಮಾಕ್ರಸಿ’ ಸತ್ಯಶೋಧನಾ ಸಮಿತಿ ವರದಿ ತಿಳಿಸಿದೆ.

ಗಲಭೆಯ ಸಂಬಂಧ ಸಮಿತಿಯು 49 ಪುಟಗಳ ಸತ್ಯಶೋಧನಾ ವರದಿಯನ್ನು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶುಕ್ರವಾರ ಸಲ್ಲಿಸಿತು.

ನಿವೃತ್ತ ನ್ಯಾಯಾಧೀಶ ಶ್ರೀಕಾಂತ್‌ ಡಿ. ಬಬಲಾಡಿ ನೇತೃತ್ವದ ಈ ಸಮಿತಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್, ನಿವೃತ್ತ ಐಎಫ್‌ಎಸ್ ಅಧಿಕಾರಿಗಳಾದ ಡಾ.ರಾಜು, ಡಾ.ಪ್ರಕಾಶ್‌, ನಿವೃತ್ತ ಡಿಜಿಪಿ ಎಂ.ಎನ್‌.ಕೃಷ್ಣಮೂರ್ತಿ, ಪತ್ರಕರ್ತ ಆರ್‌.ಕೆ.ಮಟ್ಟೂ, ಸಂತೋಷ್‌ ತಮ್ಮಯ್ಯ ಮುಂತಾದವರು ಇದ್ದಾರೆ.

ADVERTISEMENT

‘ಇದೊಂದು ಸಾಮಾನ್ಯ ಗಲಭೆ ಅಲ್ಲ. ರಾಜಕೀಯ ಉದ್ದೇಶದ್ದೂ ಅಲ್ಲ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಗುಪ್ತಚರ ವಿಭಾಗವನ್ನು ಬಲಪಡಿಸಬೇಕಾಗಿದೆ. ನಾವು ನಿಷ್ಪಕ್ಷವಾಗಿ ತನಿಖೆ ನಡೆಸಿ, ವರದಿ ಸಿದ್ಧಪಡಿಸಿದ್ದೇವೆ. ಸರ್ಕಾರ ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಮಿತಿಯ ಪರವಾಗಿ ನಿವೃತ್ತ ಐಎಎಸ್‌ ಅಧಿಕಾರಿ ಮದನ್ ಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.

ವರದಿಯ ಮುಖ್ಯಾಂಶಗಳು:

* ಇಡೀ ಗಲಭೆಯೇ ರಾಜ್ಯದ ವಿರುದ್ಧವಾದುದು. ಸಾಮಾನ್ಯ ಜನತೆ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಉದ್ದೇಶ ಈ ಪಿತೂರಿಯ ಹಿಂದೆ ಇದೆ.ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಪಾತ್ರವಿದೆ.

*ಗಲಭೆಯಲ್ಲಿ ಸಂತ್ರಸ್ತರಾದವರನ್ನು ಮಾತನಾಡಿಸಿದಾಗ, ಸ್ಥಳೀಯರು ಗಲಭೆಯಲ್ಲಿ ಪಾಲ್ಗೊಂಡಿರುವುದು ಖಚಿತವಾಗಿದೆ. ಎಫ್‌ಐಆರ್‌ನಲ್ಲೂ ಈ ಕುರಿತು ಮಾಹಿತಿಗಳಿವೆ. ಆದ್ದರಿಂದ ಸ್ಥಳೀಯರು ಗಲಭೆಯಲ್ಲಿ ಪಾಲ್ಗೊಂಡಿರುವುದು ಮಾತ್ರವಲ್ಲದೆ, ವ್ಯವಸ್ಥಿತವಾಗಿ ಗಲಭೆ ನಡೆಯುವ ಕುರಿತು ಮುಂಚಿತವಾಗಿಯೇ ಮಾಹಿತಿ ಇತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

* ಹಿಂದುಗಳಿಗೆ ಸೇರಿದ ಮನೆಗಳು ಮತ್ತು ಅಂಗಡಿ ಮುಂಗಟ್ಟುಗಳನ್ನು ಆಯ್ದು ದಾಳಿ ನಡೆಸಲಾಗಿದೆ. ಇದರಿಂದ ಹಿಂದುಗಳನ್ನು ಹೆದರಿಸಿ ಪ್ರದೇಶ ಬಿಟ್ಟು ಹೋಗುವಂತೆ ಮಾಡುವುದು ಮತ್ತು ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿ ರೂಪಿಸುವುದು ಗಲಭೆಕೋರರ ಉದ್ದೇಶವಾಗಿತ್ತು ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.