ADVERTISEMENT

ನಕಲಿ ನೋಂದಣಿ ಫಲಕ: ಡಾಟಾ ಎಂಟ್ರಿ ಆಪರೇಟರ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 22:15 IST
Last Updated 13 ಆಗಸ್ಟ್ 2022, 22:15 IST
ನಕಲಿ ನೋಂದಣಿ ಫಲಕ ಹಾಕಿಕೊಂಡಿದ್ದ ಚಾಲಕ ರಾಮ್‌ಗೋಪಾಲ್‌ ಹಾಗೂ ಅವರನ್ನು ಹಿಡಿದ ಮಾಗಡಿ ರಸ್ತೆ ಸಂಚಾರ ಪೊಲೀಸರು
ನಕಲಿ ನೋಂದಣಿ ಫಲಕ ಹಾಕಿಕೊಂಡಿದ್ದ ಚಾಲಕ ರಾಮ್‌ಗೋಪಾಲ್‌ ಹಾಗೂ ಅವರನ್ನು ಹಿಡಿದ ಮಾಗಡಿ ರಸ್ತೆ ಸಂಚಾರ ಪೊಲೀಸರು   

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಸುತ್ತಾಡುತ್ತಿದ್ದ ಆರೋಪಿ ರಾಮ್‌ ಗೋ‍ಪಾಲ್ ಎಂಬುವರನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಚೋಳರಪಾಳ್ಯ ನಿವಾಸಿ ರಾಮ್‌ಗೋಪಾಲ್, ಕಂಪನಿಯೊಂದರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬದ್ರಿಪ್ರಸಾದ್ ಎಂಬುವರ ಹೆಸರಿನಲ್ಲಿ ನೋಂದಣಿ ಹಾಕಿದ್ದ ಸಂಖ್ಯೆಯನ್ನು ತಮ್ಮ ವಾಹನಕ್ಕೆ ಅಳವಡಿಸಿಕೊಂಡು ಆರೋಪಿ ಸುತ್ತಾಡುತ್ತಿದ್ದ’ ಎಂದು ಸಂಚಾರ ಪೊಲೀಸ್ ಮೂಲಗಳು ಹೇಳಿವೆ.

‘ಮಾಗಡಿ ರಸ್ತೆಯಲ್ಲಿ ಆರೋಪಿ ವಾಹನ ತಡೆದು ಪರಿಶೀಲಿಸಲಾಗಿತ್ತು. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅಸಲಿ ಮಾಲೀಕ ಬದ್ರಿಪ್ರಸಾದ್ ಅವರನ್ನು ಪತ್ತೆ ಮಾಡಿ, ಅವರ ದಾಖಲೆ ಪರಿಶೀಲಿಸಲಾಯಿತು. ಅವಾಗಲೇ ರಾಮ್‌ಗೋಪಾಲ್ ಕೃತ್ಯ ಬಯಲಾಯಿತು. ಈತನ ಕೃತ್ಯದ ವಿರುದ್ಧ ಮಾಲೀಕರು ಕೆ.ಪಿ. ಅಗ್ರಹಾರ ಠಾಣೆಗೆ ದೂರು ನೀಡಿದ್ದಾರೆ. ಅಲ್ಲಿಯ ಪೊಲೀಸರ ಸುಪರ್ದಿಗೆ ಆರೋಪಿಯನ್ನು ಒಪ್ಪಿಸಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

11 ಸಾವಿರ ದಂಡ: ‘ತಮ್ಮ ದ್ವಿಚಕ್ರ ವಾಹನ ಕಳ್ಳತನವಾಗಿರುವುದಾಗಿ ಹೇಳಿ ಸಿಟಿ ಮಾರ್ಕೆಟ್ ಠಾಣೆಗೆ 2018ರಲ್ಲಿ ದೂರು ನೀಡಿದ್ದ ಆರೋಪಿ ರಾಮ್‌ಗೋಪಾಲ್, ವಿಮೆ ಸಹ ಡ್ರಾ ಮಾಡಿಕೊಂಡಿದ್ದರು. 2018ರಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಈ ವಿಷಯವನ್ನು ಮುಚ್ಚಿಟ್ಟಿದ್ದ ಆರೋಪಿ, ಅದೇ ವಾಹನಕ್ಕೆ ನಕಲಿ ನೋಂದಣಿ ಫಲಕ ಹಾಕಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ, ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ. ₹ 11 ಸಾವಿರ ದಂಡ ವಾಹನದ ಮೇಲಿತ್ತು. ನೋಂದಣಿ ಸಂಖ್ಯೆ ಆಧರಿಸಿ ಅಸಲಿ ಮಾಲೀಕ ಬದ್ರಿಪ್ರಸಾದ್ ಅವರಿಗೆ ಪೊಲೀಸರು ದಂಡದ ನೋಟಿಸ್ ಕಳುಹಿಸಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.