ADVERTISEMENT

₹100 ಕೋಟಿ ‍ಪರಿಹಾರಕ್ಕೆ ಬಾಲ್‌ ಪೆನ್‌ ಕರಾಮತ್ತು!

ಬಿಜೆಪಿ ಶಾಸಕರೊಬ್ಬರ ಕೈವಾಡ? *ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ಶಿಫಾರಸು

ಮಂಜುನಾಥ್ ಹೆಬ್ಬಾರ್‌
Published 27 ಸೆಪ್ಟೆಂಬರ್ 2020, 4:59 IST
Last Updated 27 ಸೆಪ್ಟೆಂಬರ್ 2020, 4:59 IST
ಎಂ.ಕೆ.ಜಗದೀಶ್‌, ವಿಶೇಷ ಜಿಲ್ಲಾಧಿಕಾರಿ
ಎಂ.ಕೆ.ಜಗದೀಶ್‌, ವಿಶೇಷ ಜಿಲ್ಲಾಧಿಕಾರಿ   
""

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಪರಿಹಾರಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹100 ಕೋಟಿ ಮೌಲ್ಯದ 17 ಎಕರೆ 35 ಗುಂಟೆ ಸರ್ಕಾರಿ ಜಾಗವನ್ನು ಯಲಹಂಕ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಐವರಿಗೆ ಪರಭಾರೆ ಮಾಡಿರುವ ಪ್ರಕರಣ ಬಯಲಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸಿರುವ ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಅವರು ಈ ದಾಖಲೆಗಳು ಬೋಗಸ್‌ ಎಂದು ಗುರುವಾರ (ಸೆಪ್ಟೆಂಬರ್‌ 24) ಆದೇಶ ಹೊರಡಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹಕ್ಕು ಸ್ಥಾಪಿಸಿರುವ ಭಾಗ್ಯಮ್ಮ, ಕೆಂಚಣ್ಣ, ಸುಬ್ರಮಣಿ, ಶಾಂತಮ್ಮ, ಬಸಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬೇಕು ಎಂದು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗೆ ಸೂಚಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ಯಲಹಂಕ ತಹಶೀಲ್ದಾರ್‌ ರಘುಮೂರ್ತಿ ಹಾಗೂ ತಹಶೀಲ್ದಾರ್ ಕಚೇರಿಯ ಇತರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದಾರೆ.

‘ಈ ಅಕ್ರಮದ ಬಗ್ಗೆ ತಿಂಗಳ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದೆ. ಇದರಲ್ಲಿ ಮುಖ್ಯಮಂತ್ರಿಗೆ ಆಪ್ತರಾಗಿರುವ ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರ ಪಾತ್ರವಿದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು’ ಎಂದು
ಬಿಎಸ್‌ಪಿಯ ರಾಜ್ಯ ಉಸ್ತುವಾರಿಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನಮ್ಮ ಮೆಟ್ರೊ’ ಸಂಪರ್ಕ ಕಲ್ಪಿಸಲು ಭೂಸ್ವಾಧೀನ ಪ್ರಕ್ರಿಯೆಗಳು ಆರಂಭವಾಗಿವೆ. ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಮೂಲಕ ಮೆಟ್ರೊ ಮಾರ್ಗ ಹೋಗುತ್ತದೆ. ಬೆಂಗಳೂರು ಮೆಟ್ರೊ ರೈಲು ನಿಗಮದಿಂದ (ಬಿಎಂಆರ್‌ಸಿಎಲ್‌) ಭೂಪರಿಹಾರ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಗ್ರಾಮಕ್ಕೆ ಬಿಎಂಆರ್‌ಸಿಎಲ್‌ ನಿಗದಿಪಡಿಸಿರುವ ಭೂ ಪರಿಹಾರದ ಪ್ರಕಾರ ಈ 17 ಎಕರೆಗೆ ಕನಿಷ್ಠ ₹100 ಕೋಟಿ ಪರಿಹಾರ ಸಿಗಲಿದೆ.

ಶೆಟ್ಟಿಗೆರೆ ಗ್ರಾಮದ ಸರ್ವೆ ಸಂಖ್ಯೆ 79ರಲ್ಲಿ 80 ಎಕರೆ 29 ಗುಂಟೆ ಜಾಗ ಇದೆ. ಈ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದು, ಇಲ್ಲಿನ 67 ಎಕರೆ 16 ಗುಂಟೆ ತಮಗೆ ಸೇರಿದ್ದು ಎಂದು 13 ಮಂದಿ ಈ ಹಿಂದೆ ದಾವೆ ಹೂಡಿದ್ದರು. ಈ ಪ್ರಕರಣ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಬಂದಿತ್ತು. ಈ ಜಾಗ ಈ 13 ಅರ್ಜಿದಾರರಿಗೆ ಸೇರಿದ್ದು ಎಂದು ವಿಶೇಷ ಜಿಲ್ಲಾಧಿಕಾರಿ 2013ರಲ್ಲಿ ಆದೇಶ ಹೊರಡಿಸಿದ್ದರು. 2011ರಿಂದ 2014ರ ನಡುವೆ ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯವರು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಆದೇಶಗಳನ್ನು ಹೊರಡಿಸಿದ್ದು, ಅವುಗಳನ್ನು ಪರಿಶೀಲನೆ ನಡೆಸಬೇಕು ಎಂದು ಕಂದಾಯ ಇಲಾಖೆಯ ‍ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ. ಹೀಗಾಗಿ, ಈ ಪ್ರಕರಣಗಳು ಮತ್ತೆ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯದ ಮುಂದೆ ಬಂದಿವೆ. ಇದರ ನಡುವೆಯೇ, 17 ಎಕರೆ 35 ಗುಂಟೆಗೆ ನಕಲಿ ದಾಖಲೆಗಳನ್ನು ತಯಾರಿಸಿ ಪರಿಹಾರ ಪಡೆಯಲು ಪ್ರಯತ್ನ ಮಾಡಲಾಗಿದೆ.

**
ಬಿಎಂಆರ್‌ಸಿಎಲ್‌ನಿಂದ ದೊಡ್ಡ ಮೊತ್ತದ ಪರಿಹಾರ ಪಡೆಯಲು ಐವರೊಂದಿಗೆ ಕೈಜೋಡಿಸಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
–ಎಂ.ಕೆ.ಜಗದೀಶ್‌, ವಿಶೇಷ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.