ADVERTISEMENT

ರೈತ ಚಳವಳಿ ಬಗ್ಗೆ ಬರಹಗಾರರ ಮೌನವೇಕೆ

ಪುರುಷೋತ್ತಮ ಬಿಳಿಮಲೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 20:33 IST
Last Updated 20 ಫೆಬ್ರುವರಿ 2021, 20:33 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ನವ ವಸಾಹತುಶಾಹಿ ವಿರುದ್ಧ ಬರೆಯುತ್ತಿದ್ದ ಬರಹಗಾರರು ರೈತರ ಹೋರಾಟದ ವಿಷಯ ಬಂದಾಗ ಮೌನ ವಹಿಸಿರುವುದೇಕೆ’ ಎಂದು ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಕುರಿತ ಎಚ್‌.ಆರ್.ನವೀನ್‌ಕುಮಾರ್ ಅವರ ‘ಕದನ ಕಣ’ ಮತ್ತು ಕೆ.ಷರೀಫಾ ಮತ್ತು ಯಮುನಾ ಗಾಂವ್ಕರ್ ಸಂಪಾದಕತ್ವದ ಕವನ ಸಂಕಲನ ‘ಹೊನ್ನಾರು ಒಕ್ಕಲು’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಮ್ಮ ಅನೇಕ ಬರಹಗಾರರು ನವ ವಸಾಹತುಶಾಹಿ ಬೆಳವಣಿಗೆ ಬಗ್ಗೆ ಬರೆದಿದ್ದಾರೆ. ನವ ವಸಾಹತುಶಾಹಿ ವ್ಯವಸ್ಥೆ ವಿರುದ್ಧ ಬೌದ್ಧಿಕವಾಗಿ ಎತ್ತಿದ್ದ ವಿರೋಧವನ್ನು ರೈತರು ಭೌತಿಕವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಬರಹಗಾರರು ಮೌನ ವಹಿಸಿದ್ದಾರೆ. ಅವರನ್ನು ಭಯ ಕಾಡುತ್ತಿದೆಯೋ ಅಥವಾ ಬೇರಾವ ಲಾಭ ಇದೆಯೋ ಗೊತ್ತಾಗುತ್ತಿಲ್ಲ’ ಎಂದರು.‌

ADVERTISEMENT

‘ಕೃಷಿ ಸೇರಿ ಎಲ್ಲವನ್ನೂ ಸರ್ಕಾರ ಖಾಸಗಿಕರಣ ಮಾಡುತ್ತದೆ. ಬ್ರಿಟಿಷರ ಕಾಲದ ವಸಾಹತುಶಾಹಿ ವ್ಯವಸ್ಥೆಗೂ ನವ ವಸಾಹತುಶಾಹಿ ಪದ್ಧತಿಗೂ ವ್ಯತ್ಯಾಸ ಇದೆ. ವೈರಿಗಳು (ಬ್ರಿಟಿಷರು) ಯಾರು ಎಂಬುದು ಅವರ ಮುಖ ಮತ್ತು ವೇಷಭೂಷಣದ ಮೂಲಕವೇ ಅಂದು ತಿಳಿಯಬಹುದಿತ್ತು. ನವ ವಸಾಹತುಶಾಹಿ ವ್ಯವಸ್ಥೆಯಲ್ಲಿ ವೈರಿಗಳನ್ನು ಆ ರೀತಿ ಗುರುತಿಸಲು ಆಗುವುದಿಲ್ಲ. ಹೀಗಾಗಿ, ಹೋರಾಟ ನಡೆಸುವುದು ಕಷ್ಟವಾಗಲಿದೆ’ ಎಂದರು.

‘ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ತೀರ್ಮಾನಿಸುವ ಅಧಿಕಾರ ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಇದೆ. ವಿದ್ಯುತ್ ಸಂಬಂಧಿಸಿದ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ತೀರ್ಮಾನ ಕೈಗೊಳ್ಳಬೇಕು. ಆದರೆ, ರಾಜ್ಯಗಳ ಅಧಿಕಾರ ಪರಿಗಣಿಸದೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಂಡು ಕಾಯ್ದೆಗಳನ್ನು ರೂಪಿಸುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ’ ಎಂದು ಹೇಳಿದರು.

‘ಸಂವಿಧಾನ ಆಶಯ ಅರ್ಥ ಮಾಡಿಕೊಳ್ಳದ ಸರ್ಕಾರ, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದನ್ನು ಪ್ರಶ್ನೆ ಮಾಡುವ ಯುವ ತಲೆಮಾರಿನ ಜತೆ ಸಂವಾದ ಮಾಡದೆ ಜೈಲಿಗೆ ತಳ್ಳುವ ಕೆಲಸ ಮಾಡುತ್ತಿದೆ. ಪಠ್ಯದಿಂದ ಹೊಸ ಧರ್ಮಗಳ ಉದಯದ ಪಾಠವನ್ನೇ ತೆಗೆದು ಹಾಕಲಾಗುತ್ತಿದೆ. ಮುಂದೆ ವಚನ ಚಳವಳಿ ಸಾಹಿತ್ಯಕ್ಕೂ ಕೈ ಹಾಕುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಿಂದಿ ಭಾಷೆಯ ಬೆಳವಣಿಗೆಯ ಪ್ರಮಾಣ ಶೇ 56ರಷ್ಟಿದ್ದರೆ, ಕನ್ನಡ ಭಾಷೆಯ ಬೆಳವಣಿಗೆ ಪ್ರಮಾಣ ಶೇ 3.75ರಷ್ಟಕ್ಕೆ ಕುಸಿದಿದೆ. ಇದು ಅಪಾಯಕಾರಿ ಬೆಳವಣಿಗೆ ಮತ್ತು ಶಿಕ್ಷಣದ ಖಾಸಗೀಕರಣದ ಪರಿಣಾಮ’ ಎಂದರು.

ಚಿಂತಕ ಡಾ. ವಿಜು ಕೃಷ್ಣನ್, ಕೇಸರಿ ಹರವು, ಎಚ್.ಆರ್.ನವೀನ್‌ಕುಮಾರ್, ಕೆ.ಷರೀಫಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.