ADVERTISEMENT

ರಾಜಧಾನಿಯಲ್ಲಿ ಐಕ್ಯ ಶಕ್ತಿ ಪ್ರದರ್ಶನ

* ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಮೊಳಗಿದ ಕಹಳೆ * ಭಾರಿ ರ‍್ಯಾಲಿ * 500ಕ್ಕೂ ಹೆಚ್ಚು ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 19:54 IST
Last Updated 28 ಸೆಪ್ಟೆಂಬರ್ 2020, 19:54 IST
'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕತ್ತೆಯ ಮೇಲೆ ಕುಳಿತು ವಿನೂತನ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ
'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕತ್ತೆಯ ಮೇಲೆ ಕುಳಿತು ವಿನೂತನ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತರು ಹಾಗೂ ಕಾರ್ಮಿಕರ ಪರವಾಗಿ ಹಲವು ಸಂಘಟನೆಗಳ ಸದಸ್ಯರು ಬೀದಿಗಿಳಿದು ಶಾಂತಿಯುತ ಪ್ರತಿಭಟನೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಭಾರಿ ರ್‍ಯಾಲಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಿದರು.

‘ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ’ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಬಂದ್‌ ಹಿನ್ನಲೆಯಲ್ಲಿ ಬಹುತೇಕ ಕಡೆಗಳಲ್ಲಿ ವ್ಯಾಪಾರ– ವಹಿವಾಟು ಸ್ಥಗಿತಗೊಂಡಿತ್ತು. ಕೆಲವರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದರು. ಹಲವೆಡೆ ಒತ್ತಾಯದಿಂದಲೇ ಅಂಗಡಿಗಳನ್ನು ಬಂದ್ ಮಾಡಿಸಿದ ಘಟನೆಗಳೂ ನಡೆದವು.

ಬಂದ್ ಪ್ರಯುಕ್ತ ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಸುಮನಹಳ್ಳಿ ವೃತ್ತ, ಕೆಂಗೇರಿ, ಯಶವಂತಪುರ, ದೇವನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಬಂದಿದ್ದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಪುರಭವನದ ಎದುರು ಸೇರಿದ್ದರು.

ADVERTISEMENT

ಮೆರವಣಿಗೆಯುದ್ದಕ್ಕೂ ಹಸಿರು ಶಾಲು ಬೀಸಿದ ಪ್ರತಿಭಟನಾಕಾರರು, ಅಂಗಡಿಗಳನ್ನು ಬಂದ್ ಮಾಡುವಂತೆ ವ್ಯಾಪಾರಿಗಳನ್ನು ಕೋರಿದರು. ಮೆರವಣಿಗೆ ಸಾಗುತ್ತಿದ್ದ ರಸ್ತೆಯಲ್ಲೆಲ್ಲ ಅಂಗಡಿಗಳು ಬಂದ್ ಆಗಿದ್ದು. ಮೆರವಣಿಗೆ ಮುಂದಕ್ಕೆ ಹೋದಂತೆ ಕೆಲವರು ಅಂಗಡಿಗಳನ್ನು ಪುನಃ ತೆರೆದಿದ್ದು ಕಂಡುಬಂತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಗಳನ್ನು ಪುರಭವನದ ಬಳಿ ಸುಟ್ಟು, ‘ನಮ್ಮ ಪಾಲಿಗೆ ಸಿ.ಎಂ., ಪಿ.ಎಂ. ಸತ್ತರು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.

ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕತ್ತೆ ಮೇಲೆ ಸವಾರಿ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಕೆಲವರು, ಕುರಿ ಹಾಗೂ ಮೇಕೆಗಳನ್ನು ತಂದಿದ್ದರು.

500ಕ್ಕೂ ಹೆಚ್ಚು ಮಂದಿ ವಶಕ್ಕೆ: ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪುರಭವನದಿಂದ ಉದ್ಯಾನದತ್ತ ‍ರ‍್ಯಾಲಿ ಆರಂಭಿಸಿದ್ದರು.ಹಸಿರು ಶಾಲು ಹಾಗೂ ಕನ್ನಡದ ಬಾವುಟಗಳು ರಾರಾಜಿಸಿದವು. ತಮಟೆ ಹಾಗೂ ವಿವಿಧ ವಾದ್ಯಗಳ ಸದ್ದು ಇತ್ತು. ಕೆಲವರು ಉರುಳು ಸೇವೆ ಮಾಡಿದರು. ಮಕ್ಕಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮೈಸೂರು ಬ್ಯಾಂಕ್‌ ವೃತ್ತದ ಬಳಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ‘ಮುಂದಕ್ಕೆ ಹೋಗಲು ಬಿಡುವುದಿಲ್ಲ. ಹೋದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು. ರಸ್ತೆಯಲ್ಲೇ ಕುಳಿತ ಪ್ರತಿಭಟನಾಕಾರರು, ಪೊಲೀಸರ ವಿರುದ್ಧವೂ ಘೋಷಣೆ ಕೂಗಿದರು. ಮುಖಂಡರು ಸೇರಿದಂತೆ 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್ಸಿನಲ್ಲಿ ಕರೆದೊಯ್ದು ನಂತರ ಬಿಟ್ಟು ಕಳುಹಿಸಿದರು.

ನಸುಕಿನಿಂದಲೇ ಪ್ರತಿಭಟನೆ; ಮೆಜೆಸ್ಟಿಕ್‌, ಗಾಂಧಿನಗರ ಹಾಗೂ ಸುತ್ತಮುತ್ತ ನಸುಕಿನಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಕರ್ನಾಟಕ ರಣಧೀರ ಪಡೆ ಸಂಘಟನೆ ಕಾರ್ಯಕರ್ತರು, ಒತ್ತಾಯದಿಂದ ಹೋಟೆಲ್ ಹಾಗೂ ಅಂಗಡಿಗಳನ್ನು ಬಂದ್ ಮಾಡಿದರು. ಆಟೊ, ಕ್ಯಾಬ್, ಬಸ್ ತಡೆದರು.25ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಕೆ.ಆರ್. ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ಅಂಗಡಿ ಬಂದ್ ಮಾಡಿಸಲು ಮುಂದಾಗಿದ್ದ ಕರವೇ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಬಸ್ ಓಡಾಟ; ಹಲವೆಡೆ ಬಸ್‌ಗಳ ಓಡಾಟವಿತ್ತು. ರ‍್ಯಾಲಿಯಿಂದಾಗಿ ಮೆಜೆಸ್ಟಿಕ್, ಗಾಂಧಿನಗರ, ಕೆ.ಆರ್.ವೃತ್ತ, ಮೈಸೂರು ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿತ್ತು.

ನಗರದಾದ್ಯಂತ ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಕಾಯ್ದೆಯಲ್ಲಿ ಅನುಕೂಲ ಹಾಗೂ ಲೋಪಗಳೆರಡೂ ಇವೆ. ಕಾಯ್ದೆ ಬಗ್ಗೆ ಎಲ್ಲರಿಗೂ ಗೊತ್ತಿಲ್ಲ. ರೈತ ಮುಖಂಡರು ಹಾಗೂ ಕಾನೂನು ತಜ್ಞರನ್ನು ಕರೆಸಿ ಚರ್ಚಿಸಿ. ಲೋಪವನ್ನು ಸರಿಪಡಿಸಿ ರೈತರ ಪರ ನಿಲ್ಲಿ. ಈ ವಿಷಯದಲ್ಲಿ ರಾಜಕೀಯ ಬೇಡ ಎಂದುಬಿಗ್‌ಬಾಸ್‌ ರಿಯಾಲಿಟಿ ಶೋ ವಿಜೇತ ಯುವ ರೈತಶಶಿ ಹೇಳಿದ್ದಾರೆ.

ರೈಲು ನಿಲ್ದಾಣಕ್ಕೆ ಮುತ್ತಿಗೆ ಯತ್ನ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಯತ್ನಿಸಿದರು. ರೈಲು ತಡೆಯಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ವಿಮಾನ ನಿಲ್ದಾಣದಲ್ಲೂ ಪ್ರತಿಭಟನೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯೂ ಕರವೇ ಸಂಘಟನೆಯ ಮಹಿಳಾ ಕಾರ್ಯಕರ್ತರು ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಟರ್ಮಿನಲ್ ಹೊರಭಾಗದಲ್ಲಿ ಬ್ಯಾನರ್‌ ಹಿಡಿದು ನಿಂತು ಘೋಷಣೆ ಕೂಗಿದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.