ADVERTISEMENT

ನಿದ್ರೆಯಲ್ಲಿದ್ದ ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ ತಂದೆ!

ಒಂದೂವರೆ ವರ್ಷದ ಮಗು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 19:43 IST
Last Updated 28 ಅಕ್ಟೋಬರ್ 2018, 19:43 IST

ಬೆಂಗಳೂರು: ಮದ್ಯವ್ಯಸನಿಯೊಬ್ಬ ಮಡದಿ ಮೇಲಿನ ಸಿಟ್ಟಿಗೆ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಘಟನೆ ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ನಡೆದಿದೆ.

ಒಂದೂವರೆ ವರ್ಷದ ಸಾಯಿ ಚರಣ್ ಎಂಬ ಮಗು ಮೃತಪಟ್ಟಿದ್ದು, ಚೇತನ್ ಸಾಯಿ (5) ಗಂಭೀರ ಗಾಯ
ಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆರೋಪಿ ತಂದೆ ಶ್ರೀನಿವಾಸ್ ಮೂರ್ತಿಯ ದೇಹವೂ ಶೇ 40ರಷ್ಟು ಸುಟ್ಟು ಹೋಗಿದೆ.

ಚಾಮರಾಜನಗರದ ಶ್ರೀನಿವಾಸ್, ದಶಕದ ಹಿಂದೆ ನಗರಕ್ಕೆ ಬಂದು ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ. ಆತನ ಮನೆ ಪಕ್ಕದಲ್ಲೇ ಹೇಮಲತಾ ಎಂಬುವರು, ಇಬ್ಬರು ಹೆಣ್ಣು ಮಕ್ಕಳ ಜತೆ ನೆಲೆಸಿದ್ದರು. ಆರೋಪಿಯು ಪತಿಯಿಂದ ಪ್ರತ್ಯೇಕವಾಗಿದ್ದ ಹೇಮಲತಾ ಅವರನ್ನು ಪ್ರೀತಿಸಿ 2013ರಲ್ಲಿ ಮದುವೆ ಆಗಿದ್ದ. ಈ ದಾಂಪತ್ಯದಲ್ಲಿ ಚೇತನ್ ಸಾಯಿ ಹಾಗೂ ಸಾಯಿ ಚರಣ್ ಜನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ನಿತ್ಯ ಪಾನಮತ್ತನಾಗಿ ಮನೆಗೆ ಬರುತ್ತಿದ್ದ ಶ್ರೀನಿವಾಸ್, ‘ಹೆಣ್ಣು ಮಕ್ಕಳಿಗೆ ನಾನು ತಂದೆ ಅಲ್ಲ. ಹೀಗಾಗಿ, ಅವರಿಬ್ಬರನ್ನು ಸಾಕುವುದಿಲ್ಲ’ ಎಂದು ಗಲಾಟೆ ಮಾಡುತ್ತಿದ್ದ. ಅಲ್ಲದೇ, ಶೀಲ ಶಂಕಿಸಿ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ವರ್ತನೆಯಿಂದ ಬೇಸರಗೊಂಡ ಹೇಮಲತಾ, ‘ನಾಲ್ಕೂ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ’ ಎಂದು ಹೇಳಿ ಎಂಟು ತಿಂಗಳ ಹಿಂದೆ ತವರು ಮನೆ ಸೇರಿದ್ದರು ಎನ್ನಲಾಗಿದೆ.

ಕಂದಾ.. ಎಂದು ಕೊಂದೇ ಬಿಟ್ಟರು: ‘ಕುಟುಂಬ ನಿರ್ವಹಣೆಗಾಗಿ ಮಾರತ್ತಹಳ್ಳಿಯ ಮನೆಯೊಂದರಲ್ಲಿ ಕೆಲಸಕ್ಕೆಸೇರಿಕೊಂಡಿದ್ದೆ. ಮಕ್ಕಳನ್ನು ನನ್ನ ಅಪ್ಪ–ಅಮ್ಮನೇ ನೋಡಿಕೊಳ್ಳುತ್ತಿದ್ದರು. ನಾನು 15 ದಿನಕ್ಕೊಮ್ಮೆ ಮನೆಗೆ ಹೋಗಿ ‌ಮಾತನಾಡಿಸಿಕೊಂಡು ಬರುತ್ತಿದ್ದೆ. ಪತಿ ಕೂಡ ಆಗಾಗ್ಗೆ ಮನೆಗೆ ಬಂದು ಮಕ್ಕಳಿಗೆ ತಿಂಡಿ ಕೊಟ್ಟು ಹೋಗುತ್ತಿದ್ದರು’ ಎಂದು ಹೇಮಲತಾ ಹೇಳಿಕೆ ನೀಡಿದ್ದಾರೆ.

‘ವಾರದ ಹಿಂದೆ ಪಾನಮತ್ತರಾಗಿ ಮನೆಗೆ ಬಂದಿದ್ದ ಪತಿ, ಚರಣ್ ಹಾಗೂ ಚೇತನ್‌ನನ್ನು ತನ್ನೊಟ್ಟಿಗೆ ಕಳುಹಿಸುವಂತೆ ಗಲಾಟೆ ಮಾಡಿದ್ದರು. ಅದಕ್ಕೆ ಒಪ್ಪದಿದ್ದಾಗ ಶನಿವಾರ ಮಧ್ಯಾಹ್ನ ಕರೆ ಮಾಡಿದ ಅವರು, ‘ಕೊನೆ ಸಲ ಕಂದಮ್ಮಗಳನ್ನು ನೋಡಬೇಕು’ ಎಂದರು. ಅವರ ಮಾತು ಕೇಳಿ ಪಾಪ ಎನಿಸಿತು. ಕೂಡಲೇ ತಾಯಿಗೆ ಕರೆ ಮಾಡಿ, ಮಕ್ಕಳನ್ನು ಮನೆ ಸಮೀಪದ ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದೆ. ಪತಿ ಅಲ್ಲಿಗೇ ಬಂದು ಹೋಗಲಿ. ಯಾವುದೇ ಕಾರಣಕ್ಕೂ ಅವರ ಜತೆ ಮಕ್ಕಳನ್ನು ಕಳುಹಿಸಬೇಡಿ ಎಂದೂ ತಾಯಿಗೆ ತಿಳಿಸಿದ್ದೆ. ’

‘ಅಂತೆಯೇ ತಾಯಿ 5 ಗಂಟೆ ಸುಮಾರಿಗೆ ಪಾರ್ಕ್‌ಗೆ ತೆರಳಿದ್ದರು. ತಿಂಡಿ ಕೊಡಿಸಿಕೊಂಡು ಬರುವುದಾಗಿ ಸುಳ್ಳು ಹೇಳಿ ಮಕ್ಕಳನ್ನು ಪಾರ್ಕ್‌ನಿಂದ ಹೊರಗೆ ಕರೆದೊಯ್ದ ಪತಿ, ಬಳಿಕ ಬೈಕ್‌ನಲ್ಲಿ ತಮ್ಮ ಮನೆಗೆ ಕರೆದೊಯ್ದಿದ್ದರು. ರಾತ್ರಿ 9 ಗಂಟೆಗೆ ಕರೆ ಮಾಡಿ, ‘ನಾಳೆ ನಾನು ಬೇರೆ ಮದುವೆ ಆಗುತ್ತಿದ್ದೇನೆ. ನೀನೂ ಬರಬೇಕು’ ಎಂದರು. ಅದಕ್ಕೆ, ಏನಾದರೂ ಮಾಡಿಕೊ. ಮೊದಲು ಮಕ್ಕಳನ್ನು ತಂದು ಮನೆಗೆ ಬಿಡು ಎಂದಿದ್ದೆ. ಬೆಳಿಗ್ಗೆ ಮನೆಗೆ ಬರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದರು’ ಎಂದು ಹೇಮಲತಾ ಹೇಳಿಕೆ ನೀಡಿದ್ದಾರೆ.

ಬಟ್ಟೆ ಜೋಡಿಸಿ ಬೆಂಕಿ: ‘ರಾತ್ರಿ ಊಟ ಮಾಡಿಸಿ ಮಕ್ಕಳನ್ನು ಮಲಗಿಸಿದ್ದ ಆರೋಪಿ, ನಸುಕಿನ ವೇಳೆ (2 ಗಂಟೆ ಸುಮಾರಿಗೆ) ಎದ್ದಿದ್ದಾನೆ. ನಿದ್ರಿಸುತ್ತಿದ್ದ ಮಕ್ಕಳ ಸುತ್ತ ಬಟ್ಟೆಗಳನ್ನು ಜೋಡಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಕ್ಕಳ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಕೂಡಲೇ ನೀರೆರಚಿ ಬೆಂಕಿ ನಂದಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಚರಣ್ ಕೊನೆಯುಸಿರೆಳೆದಿದ್ದಾನೆ’ ಎಂದು ತಲಘಟ್ಟಪುರ ‍ಪೊಲೀಸರು ಮಾಹಿತಿ ನೀಡಿದರು.

ಮಕ್ಕಳೆಲ್ಲ ಒಂದೇ ಅಲ್ಲವೇ...

ಬೆಳಿಗ್ಗೆ ಆಸ್ಪತ್ರೆ ಬಳಿ ಬಂದಿದ್ದ ಹೇಮಲತಾ, ‘ನಾಲ್ಕೂ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದೆ. ಪತಿಗೆ ಯಾವುದೇ ಕಷ್ಟ ಕೊಟ್ಟಿರಲಿಲ್ಲ. ಆದರೂ, ಹೀಗೇಕೆ ಮಾಡಿದರೋ ಗೊತ್ತಿಲ್ಲ. ಅವರ ಕುಡಿತದ ಚಟಕ್ಕೆ ನನ್ನ ಕಂದಮ್ಮ ಬಲಿಯಾಯಿತು. ಹೆಣ್ಣಾದರೇನು? ಗಂಡಾದರೇನು? ಎಲ್ಲರೂ ಮಕ್ಕಳೇ ಅಲ್ಲವೇ...’ ಎಂದು ದುಃಖತಪ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.