
ಬೆಂಗಳೂರು: ನಗರದ ಅತ್ಯಂತ ಹಳೆಯ ಅನುದಾನಿತ ಶಿಕ್ಷಣ ಸಂಸ್ಥೆಯಾದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು ಸ್ವಾಯತ್ತತೆ ಕಳೆದುಕೊಳ್ಳುವ ಆತಂಕದಲ್ಲಿದೆ.
ಮಲ್ಲೇಶ್ವರದಲ್ಲಿರುವ ಕಾಲೇಜಿಗೆ ಸೇರಿದ 1.5 ಎಕರೆ ಭೂಮಿಯ ಗುತ್ತಿಗೆ ಅವಧಿ ಮುಗಿದು 18 ವರ್ಷ ಕಳೆದರೂ ಈವರೆಗೂ ನವೀಕರಣ ಆಗಿಲ್ಲ. ಹೀಗಾಗಿ ಕಾಲೇಜಿನ ಪ್ರವೇಶಾತಿಗೆ ಅನುಮೋದನೆ ನೀಡಬಾರದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಮಧ್ಯೆ ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಷರತ್ತಿಗೆ ಒಳಪಟ್ಟು, ಆರು ತಿಂಗಳ ಒಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿ, ಅನುಮೋದನೆ ನೀಡಿದೆ.
1972ರಲ್ಲಿ ಆರಂಭವಾಗಿರುವ ಈ ಶಿಕ್ಷಣ ಸಂಸ್ಥೆಯಲ್ಲಿ 3,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಂದು ವೇಳೆ ಸರ್ಕಾರ ಗುತ್ತಿಗೆ ಅವಧಿಯನ್ನು ಮುಂದುವರಿಸದೆ ಇದ್ದರೆ ಸ್ವಾಯತ್ತತೆಯನ್ನು ಕಳೆದುಕೊಳ್ಳಲಿದೆ. ಅಷ್ಟೇ ಅಲ್ಲದೆ ಶೈಕ್ಷಣಿಕ ಸಂಯೋಜನೆಯೂ ರದ್ದಾಗಲಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ವರ್ಷಕ್ಕೆ ₹1ಸಾವಿರ ದರದಂತೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ 1.5 ಎಕರೆ ಭೂಮಿಯನ್ನು 1978ರಲ್ಲಿ ಈ ಸಂಸ್ಥೆಗೆ ನೀಡಲಾಗಿತ್ತು. ಗುತ್ತಿಗೆ ಅವಧಿ 2008ರಲ್ಲಿ ಮುಗಿದಿದ್ದು, ಇದುವರೆಗೂ ನವೀಕರಣ ಆಗಿಲ್ಲ. ನವೀಕರಣ ಪ್ರಕ್ರಿಯೆ ಬಹಳ ಹಿಂದೆಯೇ ಆರಂಭವಾಗಿದ್ದರೂ, ಇದುವರೆಗೂ ಪೂರ್ಣಗೊಂಡಿಲ್ಲ.
ಗುತ್ತಿಗೆ ನವೀಕರಣ ವಿಷಯ ಕಳೆದ ವಾರ ಸಚಿವ ಸಂಪುಟ ಸಭೆಯ ಮುಂದೆ ಬಂದಿತ್ತು. ಈಗಿನ ಮಾರುಕಟ್ಟೆ ದರದ ಪ್ರಕಾರ ಜಾಗದ ಗುತ್ತಿಗೆ ನವೀಕರಣಕ್ಕೆ ₹90 ಕೋಟಿ ನಿಗದಿ ಮಾಡಬೇಕಾಗಬಹುದು. ಆದರೆ, ಇಷ್ಟೊಂದು ಹಣ ನಿಗದಿ ಮಾಡಿದರೆ ಕಷ್ಟವಾಗುತ್ತದೆ ಎಂದು ಕೆಲವು ಸಚಿವರು ಹೇಳಿದರು. ಆಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡೋಣ ಎಂಬುದಾಗಿ ತಿಳಿಸಿದರು ಎನ್ನಲಾಗಿದೆ.
2022–23ರಲ್ಲಿ ಯುಜಿಸಿಯು ಕಾಲೇಜಿಗೆ ಸ್ವಾಯತ್ತತೆ ನೀಡಿದೆ. ಆದರೆ, ಪರಿಶೀಲನೆ ವೇಳೆ ಕಾಲೇಜಿನ ಜಾಗದ ಗುತ್ತಿಗೆ ಅವಧಿ 2008ರಲ್ಲೇ ಮುಕ್ತಾಯವಾಗಿರುವುದು ಗೊತ್ತಾಗಿದೆ. ಕಾಲೇಜಿಗೆ ಸ್ವಾಯತ್ತತೆ ನೀಡುವ ಸಂದರ್ಭದಲ್ಲಿ ನಿರಾಕ್ಷೇಪಣಾ ಪತ್ರವನ್ನು ಸರ್ಕಾರ ಮತ್ತು ವಿಶ್ವವಿದ್ಯಾಲಯ ನೀಡಿದ್ದು, ಎರಡೂ ಕಡೆಯಿಂದ ಲೋಪವಾಗಿದೆ ಎಂದು ಗೊತ್ತಾಗಿದೆ.
‘ಭೂಮಿಯ ಗುತ್ತಿಗೆ ನವೀಕರಣ ಆಗದೆ ಸ್ವಾಯತ್ತೆ ಮುಂದುವರಿಸಲು ಆಗುವುದಿಲ್ಲ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕಾಲಮಿತಿಯೊಳಗೆ ಅನುಮತಿ ಪಡೆಯಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಸೂಚನೆ ನೀಡಿತ್ತು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ನಾಗಾನಂದ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ, ಜಾಗದ ಗುತ್ತಿಗೆ ನವೀಕರಣ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ನವೀಕರಣ ಸಂಬಂಧ ಇದುವರೆಗೆ ಸರ್ಕಾರಕ್ಕೆ 126 ಪತ್ರಗಳನ್ನು ಬರೆದಿರುವುದಾಗಿ ಅವರು ತಿಳಿಸಿದರು.
’ಕಾಲೇಜಿನ ಆಡಳಿತ ಮಂಡಳಿಯವರು ನಿಗದಿತ ಅವಧಿಯೊಳಗೆ ಭೂಮಿಯ ಗುತ್ತಿಗೆ ನವೀಕರಣ ಮಾಡಿಸಿಕೊಳ್ಳದೇ ಇದ್ದರೆ ಸ್ವಾಯತ್ತತೆ ರದ್ದಾಗಲಿದೆ. ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗದಂತೆ ವಿದ್ಯಾರ್ಥಿಗಳನ್ನು ಇತರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಾಲೇಜಿನಲ್ಲಿ ಹಿಂದುಳಿದ ದಲಿತ ಸಮುದಾಯಕ್ಕೆ ಸೇರಿದ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುತ್ತಿಗೆ ನವೀಕರಣ ವಿಷಯ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಗೊಂದಲ ಬೇಗನೇ ಬಗೆಹರಿಯುವ ವಿಶ್ವಾಸವಿದೆ.- ಕೆ.ಜೈರಾಜ್, ಮ್ಯಾನೆಜಿಂಗ್ ಟ್ರಸ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.