ADVERTISEMENT

ಫೆ.10ರಿಂದ 14: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ

ಮೈನವಿರೇಳಿಸುವ ಪ್ರದರ್ಶನದ ಜೊತೆಗೆ ನಡೆಯಲಿವೆ ಹಲವು ಸಮಾವೇಶ, ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 16:32 IST
Last Updated 6 ಜನವರಿ 2025, 16:32 IST
ವೈಮಾನಿಕ ಪ್ರದರ್ಶನ (ಸಾಂದರ್ಭಿಕ ಚಿತ್ರ)
ವೈಮಾನಿಕ ಪ್ರದರ್ಶನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ಶತಕೋಟಿ ಅವಕಾಶಗಳ ಓಡುಪಥ’ (ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್) ಎಂಬ ವಿಶಾಲ ಧ್ಯೇಯದೊಂದಿಗೆ ಯಲಹಂಕದ ವಾಯುನೆಲೆಯಲ್ಲಿ ಫೆಬ್ರುವರಿ 10ರಿಂದ 14ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ.

ಕಾರ್ಯಕ್ರಮದ ಫೆ.10ರಿಂದ ಮೊದಲ ಮೂರು ದಿನಗಳು ವ್ಯವಹಾರದ ದಿನಗಳಾಗಿರುತ್ತವೆ. ಫೆ. 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಏರೋಸ್ಪೇಸ್ ವಲಯದಿಂದ ಉನ್ನತ ಶ್ರೇಣಿಯ ಮಿಲಿಟರಿ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನ ಇರಲಿವೆ ಎಂದು ರಕ್ಷಣಾ ಇಲಾಖೆಯ ಮಾಧ್ಯಮ ಮಾಹಿತಿ ಬ್ಯೂರೊ ತಿಳಿಸಿದೆ.

ಮೈ ನವಿರೇಳಿಸುವ ವೈಮಾನಿಕ ಪ್ರದರ್ಶನ ಆಕರ್ಷಣೆಯ ಕೇಂದ್ರವಾಗಿದ್ದರೂ ಅದರ ನೇಪಥ್ಯದಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮಿತ್ರರಾಷ್ಟ್ರಗಳೊಂದಿಗೆ ರಕ್ಷಣಾ ಸಹಭಾಗಿತ್ವದ ಮಾತುಕತೆಯನ್ನು ಸುಲಭಗೊಳಿಸಲು ರಕ್ಷಣಾ ಸಚಿವರ ಸಮಾವೇಶವೂ ನಡೆಯಲಿದೆ ಎಂದು ಹೇಳಿದೆ.

ADVERTISEMENT

ಸಿಇಒಗಳ ದುಂಡುಮೇಜಿನ ಸಭೆಯು ವಿದೇಶಗಳ ಸಲಕರಣೆ ತಯಾರಕರಿಗೆ (ಒಇಎಂಗಳು) ಭಾರತದಲ್ಲಿ ತಯಾರಿಕೆಗೆ ಅನುಕೂಲಕರ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ. ವಿದೇಶಿ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,  ದೇಶೀಯ ಸಾರ್ವಜನಿಕ ವಲಯದ ಉದ್ದಿಮೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭಾರತದ ಖಾಸಗಿ ರಕ್ಷಣಾ ಮತ್ತು ವೈಮಾನಿಕ ತಯಾರಿಕಾ ಕಂಪನಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ನವೋದ್ಯಮಗಳ ಪ್ರಚಾರವೇ ಏರೊ ಇಂಡಿಯಾ–2025ರ ಮುಖ್ಯ ಉದ್ದೇಶವಾಗಿದೆ. ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನ/ ಉತ್ಪನ್ನಗಳನ್ನು ವಿಶೇಷ ಐಡೆಕ್ಸ್‌ ಪೆವಿಲಿಯನ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ಇದಲ್ಲದೆ, ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳು ವಿಶಿಷ್ಟ ಅನುಭವವನ್ನು ಒದಗಿಸಲಿವೆ. ಆಧುನಿಕ ಏರೋಸ್ಪೇಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಕಾರ್ಯಕ್ರಮದ ಭಾಗವಾಗಿ ವಿವಿಧ ವಿಚಾರಸಂಕಿರಣಗಳನ್ನು ಆಯೋಜಿಸಲಾಗಿದೆ ಎಂದು ಮಾಧ್ಯಮ ಮಾಹಿತಿ ಬ್ಯೂರೊ ತಿಳಿಸಿದೆ.

ಹೊಸ ಮೈಲುಗಲ್ಲಾಗಲಿದೆ

15ನೇ ಆವೃತ್ತಿ ಬೆಂಗಳೂರಿನಲ್ಲಿ 1996ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ವೈಮಾನಿಕ ಪ್ರದರ್ಶನ ಆಯೋಜಿಸಲಾಗುತ್ತಿದೆ. 14 ಆವೃತ್ತಿಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.  ಹಿಂದಿನ ಆವೃತ್ತಿಗಳು 7 ಲಕ್ಷಕ್ಕೂ ಅಧಿಕ ವೀಕ್ಷಕಕರು 98 ದೇಶಗಳ ಗಣ್ಯರು ಮತ್ತು ಉದ್ಯಮಿಗಳು ಹೂಡಿಕೆದಾರರು ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್‌ಎಂಇಗಳು ಸೇರಿ 809ಕ್ಕೂ ಅಧಿಕ ಪ್ರದರ್ಶಕರನ್ನು ಆಕರ್ಷಿಸಿದ್ದವು. 201 ಒಡಂಬಡಿಕೆಗಳಿಗೆ ಸಹಿ ಪ್ರಮುಖ ಘೋಷಣೆ ಉತ್ಪನ್ನ ಬಿಡುಗಡೆ ₹75 ಸಾವಿರ ಕೋಟಿಗೂ ಅಧಿಕ ಮೌಲ್ಯದ ತಂತ್ರಜ್ಞಾನ ವರ್ಗಾವಣೆಗಳು ನಡೆದಿದ್ದವು. 250 ಪಾಲುದಾರಿಕೆಗಳಿಗೆ ಸಾಕ್ಷಿಯಾಗಿದ್ದವು. 15ನೇ ಆವೃತ್ತಿಯು ಇದನ್ನು ಮೀರಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ವೈಮಾನಿಕ ಪ್ರದರ್ಶನದ ವ್ಯಾಪ್ತಿ ಮತ್ತು ವೈಭವ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾಧ್ಯಮ ಮಾಹಿತಿ ಬ್ಯೂರೊ (ಡಿಫೆನ್ಸ್‌ ವಿಂಗ್‌) ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.