ADVERTISEMENT

ಭೂಸುಧಾರಣೆ ಕಾಯ್ದೆ ತಿದ್ದುಪಡಿ: ರಾಜ್ಯಕ್ಕೆ ಶೇ 42 ಎಫ್‌ಡಿಐ

ಎಫ್‌ಕೆಸಿಸಿಐ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 21:13 IST
Last Updated 16 ಡಿಸೆಂಬರ್ 2020, 21:13 IST
ಸಭೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ. ಸುಂದರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿದರು. ಉಪಾಧ್ಯಕ್ಷ ಐ.ಎಸ್. ಪ್ರಸಾದ್, ಸಿ.ಆರ್. ಜನಾರ್ದನ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಇದ್ದಾರೆ.  ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ. ಸುಂದರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿದರು. ಉಪಾಧ್ಯಕ್ಷ ಐ.ಎಸ್. ಪ್ರಸಾದ್, ಸಿ.ಆರ್. ಜನಾರ್ದನ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಇದ್ದಾರೆ.  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭೂಸುಧಾರಣಾ ಕಾಯ್ದೆಯಲ್ಲಿ ಸುಧಾರಣೆ ತಂದಿದ್ದಲ್ಲದೆ, ಹಲವು ಕ್ರಾಂತಿಕಾರಿ ಬದಲಾವಣೆ ಮಾಡಿದ್ದರಿಂದ ಕೋವಿಡ್‌ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ರಾಜ್ಯಕ್ಕೆ ಶೇ 42ರಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದು ಬಂದಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 103ನೇ ಸರ್ವ ಸದಸ್ಯರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಕೋವಿಡ್‌ ಅನನುಕೂಲಗಳನ್ನು ತಗ್ಗಿಸಲು, ಆರ್ಥಿಕ ಬೆಳವಣಿಗೆ ಸಾಧಿಸಿ ಸ್ಥಿರತೆ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಸೂಕ್ತ ಪರಿಹಾರ ಮತ್ತು ಉತ್ತೇಜನ ಪ್ಯಾಕೇಜ್‍ಗಳನ್ನು ಘೋಷಿಸಿವೆ’ ಎಂದು ತಿಳಿಸಿದರು.

‘ಪ್ರಸ್ತುತ ಸನ್ನಿವೇಶದ ಮಧ್ಯೆ ವಾಣಿಜ್ಯ ಸಂಸ್ಥೆಗಳು, ಎಂ.ಎಸ್.ಎಂ.ಇ ವಲಯಗಳು ಮತ್ತು ದೊಡ್ಡ ಉದ್ದಿಮೆದಾರರು ಈಗ ಕಾರ್ಯಾಚರಣೆ ಆರಂಭಿಸಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

ADVERTISEMENT

ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕ್ಕಲ್‌ ಎಂ. ಸುಂದರ್‌ ಅವರು ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಎಫ್‌ಕೆಸಿಸಿಐನ ಸರ್ ಎಂ. ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಸಂಸ್ಥೆ ಹೊರತಂದ ‘ಕೋವಿಡ್ ಅವಧಿಯಲ್ಲಿ ಔದ್ಯೋಗಿಕ ಬಿಕ್ಕಟ್ಟು ಮತ್ತು ಇದರಿಂದ ಹೊರಬರಲು ಇರುವ ಮಾರ್ಗೋಪಾಯಗಳು’ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಕೋವಿಡ್‌ನಿಂದ 10 ಕೋಟಿ ಉದ್ಯೋಗ ನಷ್ಟ: ವೇತನ ಪಡೆಯುವ ಎರಡು ಕೋಟಿ ಉದ್ಯೋಗಿಗಳೂ ಸೇರಿದಂತೆ ಕೋವಿಡ್ ಬಿಕ್ಕಟ್ಟಿನಿಂದ ದೇಶದಲ್ಲಿ ಹತ್ತು ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಿರು ಹೊತ್ತಿಗೆಯಲ್ಲಿ ಉಲ್ಲೇಖಿಸಲಾಗಿದೆ.

2020ರ ಮೇ ಹಾಗೂ ಪ್ರಸ್ತುತ ಸ್ಥಿತಿಗೆ ಹೋಲಿಸಿದರೆ, ಲಾಕ್‌ಡೌನ್‌ ನಂತರ ಕಾರ್ಮಿಕ ವಲಯ ತುಸು ಸುಧಾರಣೆ ಕಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರ ಸಹಭಾಗಿತ್ವ ಶೇ 35.6ರಿಂದ ಶೇ 38.22ರಷ್ಟು ಆಗಿದೆ. ಉದ್ಯೋಗ ಪ್ರಮಾಣ ಕೂಡ ಶೇ 27.2ರಿಂದ ಶೇ. 29.2ಕ್ಕೆ ಏರಿಕೆ ಕಂಡಿದೆ. ಆದರೆ, 2019-20ಕ್ಕೆ ಹೋಲಿಸಿದರೆ, ಈಗಲೂ ಅಂದಾಜು ಹತ್ತು ಕೋಟಿ ಜನ ಉದ್ಯೋಗದಿಂದ ಹೊರಗುಳಿದಿದ್ದಾರೆ ಎಂದು ವರದಿ ಹೇಳಿದೆ.

ನಿರ್ದಿಷ್ಟ ಕೌಶಲಯುತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಫ್ರೀಲಾನ್ಸರ್ ಅಥವಾ ಅಲ್ಪಾವಧಿ ಗುತ್ತಿಗೆ ರೂಪದಲ್ಲಿ ಕೆಲಸ ಮಾಡುವವರಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಅವಕಾಶಗಳಿವೆ. 2023ರ ವೇಳೆಗೆ ಈ ವಲಯದಲ್ಲಿ ಶೇ 17ರಷ್ಟು ಪ್ರಗತಿ ಕಂಡುಬರಲಿದೆ ಅದು ಹೇಳಿದೆ.

ಈ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಹಂತ-ಹಂತವಾಗಿ ಸ್ಮಾರ್ಟ್ ಪರಿಹಾರ, ದುರ್ಬಲ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ಸಣ್ಣ-ಪುಟ್ಟ ವ್ಯಾಪಾರ-ವಹಿವಾಟು ಪುನರಾರಂಭ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಲ್ಲಿ ಆನ್‌ಲೈನ್ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಬಳಕೆಯಂತಹ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.