ADVERTISEMENT

ವಸಂತನಗರ ಹಬ್ಬದಲ್ಲಿ ಸಂತಸದ ಹೊನಲು

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮ ಎಲ್ಲರನ್ನೂ ಕೈಬೀಸಿ ಕರೆದ ವಿವಿಧ ಮಳಿಗೆಗಳು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 20:15 IST
Last Updated 2 ಡಿಸೆಂಬರ್ 2018, 20:15 IST
ಆಟದಲ್ಲಿ ನಿರತವಾಗಿರುವ ಚಿಣ್ಣರು - (ಎಡಚಿತ್ರ) ಹಬ್ಬದಲ್ಲಿ ಭಾಗವಹಿಸಿದ್ದ ಜನಸ್ತೋಮ - –ಪ್ರಜಾವಾಣಿ ಚಿತ್ರಗಳು
ಆಟದಲ್ಲಿ ನಿರತವಾಗಿರುವ ಚಿಣ್ಣರು - (ಎಡಚಿತ್ರ) ಹಬ್ಬದಲ್ಲಿ ಭಾಗವಹಿಸಿದ್ದ ಜನಸ್ತೋಮ - –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಬಣ್ಣ ಬಣ್ಣದ, ಬಗೆಬಗೆಯ ಕನ್ನಡಕ ಧರಿಸಿ ಛಾಯಾಚಿತ್ರಕ್ಕೆ ಫೋಸ್‌ ಕೊಡುತ್ತಿದ್ದ ಪುಟಾಣಿಗಳು ಒಂದೆಡೆಯಾದರೆ, ತರಹೇವಾರಿ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದ ಹಿರಿಯರು ಇನ್ನೊಂದೆಡೆ.

ವಸಂತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಯು ಭಾನುವಾರ ಆಯೋಜಿಸಿದ್ದ ‘ವಸಂತನಗರ ಹಬ್ಬ’ ಎಳೆಯರು ಹಿರಿಯರು ಎಂಬ ಭೇದಭಾವವಿಲ್ಲದೇ ಎಲ್ಲ ವಯಸ್ಸಿನವರಿಗೂ ಖುಷಿ ನೀಡಿತು.

ಕೆಲವು ಚಿಣ್ಣರು ಆವೆಮಣ್ಣಿನಿಂದ ತಯಾರಿಸಿದ ಕಲಾಕೃತಿಗಳನ್ನು ನೋಡುತ್ತಾ ಮೈಮರೆತರು. ಇನ್ನು ಕೆಲವರು ಹಕ್ಕಿಯ ಬೊಂಬೆಗಳನ್ನು ನೀರಿನಲ್ಲಿ ಅದ್ದಿ ಅದನ್ನೇ ಪೀಪಿಯಂತೆ ಊದಿದರು. ಅದರಿಂದ ಹಕ್ಕಿಯ ಇಂಚರದಂತೆ ಹೊಮ್ಮುತ್ತಿದ್ದ ಲಯಬದ್ಧ ಸದ್ದು ಕೇಳಿ ನಕ್ಕು
ನಲಿದರು.ಹಲವರು ಚಾಕೋಲೆಟ್‌, ಐಸ್‌ಕ್ರೀಂ, ಬಗೆಬಗೆಯ ತಿಂಡಿ, ತಿನಿಸುಗಳನ್ನು ಸವಿದರು. ಅಪ್ಪ, ಅಮ್ಮಂದಿರು ಸಹ ಮಕ್ಕಳು ಹಾಗೂ ಸ್ನೇಹಿತರ ಜತೆ ಸೇರಿಕೊಂಡು ಹಬ್ಬದ ವಾತಾವರಣದಲ್ಲಿ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ADVERTISEMENT

ಸಾಂಸ್ಕೃತಿಕ ಮೆರವಣಿಗೆ: ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ವೀರಗಾಸೆಯಲ್ಲಿ ಶಿವನ ಅವತಾರಿಯ ಕುಣಿತ ಹಾಗೂ ಪಂಜಾಬಿ ಶೈಲಿಯ ಡೋಲು ನೃತ್ಯ ಗಮನ ಸೆಳೆದವು.

ಬಗೆಬಗೆ ಟೋಪಿ: ಮಕ್ಕಳನ್ನು ಆಕರ್ಷಿಸಲು, ಫೋಟೊ ತೆಗೆದುಕೊಳ್ಳಲು ಉಚಿತವಾಗಿ ಬಗೆಬಗೆಯ ಟೋಪಿ, ದೊಡ್ಡ ದೊಡ್ಡ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು. ಅಮ್ಮ ಈ ಟೋಪಿ ನನಗೆ ಒಪ್ಪುತ್ತದಾ, ಈ ಕನ್ನಡಕ ಓಕೆ ನಾ, ಅಪ್ಪಾ ನನಗೆ ಇದು ಬೇಕು ಎನ್ನುತ್ತಿದ್ದ ಪುಟಾಣಿಗಳು ಅಲ್ಲಿಯೇ ನಿಂತು ಕ್ಯಾಮೆರಾಕ್ಕೆ ಫೋಸ್‌ ಕೊಟ್ಟರು.

ಏನೇನಿದ್ದವು?: ಪ್ರಾಜೆಕ್ಟ್‌ ಮಿಷನ್‌ ಹಾಗೂ ಕರ್ನಾಟಕ ಫ್ಯೂಷನ್‌ ಬ್ಯಾಂಡ್‌, ಕರ್ನಾಟಕ ಸಂಗೀತ ಆಧರಿತ ರಾಕ್‌ ಬ್ಯಾಂಡ್‌ ಸಂಗೀತ, ಚಿತ್ರಗೀತೆಗಳ ಗಾಯನ (ಸ್ಯಾಂಡಲ್‌ವುಡ್‌ ಟು ಬಾಲಿವುಡ್‌), ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಿದವು. ಪುಸ್ತಕಗಳ ಮಾರಾಟ, ಹತ್ತಿ ಹಾಗೂ ಅಂಚಿನ ಸೀರೆ, ಸಿದ್ಧ ಉಡುಪು, ಮುತ್ತು, ಪಚ್ಚೆ, ಹರಳು, ಬ್ಲ್ಯಾಕ್‌ ಮೆಟಲ್‌ ಆಭರಣಗಳ ಮಾರಾವೂ ಭರದಿಂದ ಸಾಗಿತ್ತು. ಜಿಲೇಬಿ, ಕರದಂಟು, ಹೋಳಿಗೆ, ಸಾವಯವ ಸಿರಿಧಾನ್ಯಗಳು ಸೇರಿದಂತೆ ಬಗೆಬಗೆಯ ತಿಂಡಿ, ತಿನಿಸುಗಳನ್ನು ಸವಿಯುವ ಅವಕಾಶವೂ ಇಲ್ಲಿತ್ತು.

ತಪಾಸಣೆ:ಹಿಯರಿಂಗ್‌ ವೆಲ್‌ನೆಸ್‌ ಕ್ಲಿನಿಕ್‌ ವತಿಯಿಂದ ಕಿವಿಯನ್ನು ಉಚಿತವಾಗಿ ತಪಾಸಣೆ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು.

‘ಗಿಡ ಖರೀದಿಸಿ ಖುಷಿ ಪಟ್ಟರು’

ಹಬ್ಬದಲ್ಲಿ ಪುಟ್ಟ ಪುಟ್ಟ ಗಿಡಗಳು (ಬೋನ್ಸಾಯ್‌) ಮಾರಾಟಕ್ಕಿದ್ದವು. ಮನೆಯ ಅಂದ ಹೆಚ್ಚಿಸುವ, ಬಹುವರ್ಷ ಬಾಳಿಕೆ ಬರುವ ಹಾಗೂ ಕಡಿಮೆ ನಿರ್ವಹಣೆಯಲ್ಲಿ ಬೆಳೆಯುವ ಇಂತಹ ಗಿಡಗಳಿಗೆ ಭಾರಿ ಬೇಡಿಕೆಯೂ ಇತ್ತು.

ಮಳಿಗೆಯೊಂದರಲ್ಲಿ ಸುಮಾರು ₹1,500 ಯಿಂದ ₹12,000 ವರೆಗಿನ ಗಿಡಗಳಿದ್ದವು. ಜೇಡ್, ಇಸ್ರೇಲ್‌ ಆರೇಂಜ್‌ ಮುಂತಾದ ಗಿಡಗಳು ಗಮನ ಸೆಳೆದವು.

‘ಹಬ್ಬದ ವರಮಾನದಿಂದ ಹಿರಿಯರಿಗೆ ನೆರವು’

‘ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಲು ಈ ಬಾರಿಯ ಹಬ್ಬದಿಂದ ಬರುವ ವರಮಾನವನ್ನು ಬಳಸಲಿದ್ದೇವೆ. ಹಿರಿಯರಿಗಾಗಿ ‘ಸಹಾಯವಾಣಿ’ಯನ್ನೂ ತೆರೆಯಲಿದ್ದೇವೆ’ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್‌.ಸುನೀಲ್‌ಕುಮಾರ್‌ ತಿಳಿಸಿದರು. ‘ಕಳೆದ ಬಾರಿ ಹಬ್ಬಕ್ಕೆ ₹5 ಲಕ್ಷ ವೆಚ್ಚವಾಗಿತ್ತು. ಸುಮಾರು ₹60,000 ವರಮಾನ ಬಂದಿತ್ತು. ಇದರಿಂದ ಸುಮಾರು 260 ಜನಕ್ಕೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, 300ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.