ADVERTISEMENT

ಫೈಬರ್ ಕೇಬಲ್ ಸಮಸ್ಯೆ ಪರಿಹರಿಸಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 19:26 IST
Last Updated 6 ಜನವರಿ 2021, 19:26 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ನಗರದ ಬೀದಿ ಬೀದಿಗಳಲ್ಲಿ ನೇತಾಡುತ್ತಿರುವ ಫೈಬರ್ ಕೇಬಲ್‌ಗಳಿಂದ ಸಾಮಾನ್ಯ ಜನರು ಅನುಭವಿಸುತ್ತಿರುವ ತೊಂದರೆ ತಪ್ಪಿಸಲು ಪರಿಹಾರ ಮಾರ್ಗ ಕಂಡುಕೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಇಂಟರ್‌ನೆಟ್, ಟಿವಿ ಮತ್ತು ವಿದ್ಯುತ್ ಕೇಬಲ್‌ಗಳು ಜೋತು ಬಿದ್ದ ಸ್ಥಿತಿಯಲ್ಲಿವೆ. ಇದರಿಂದ ಜನರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು’ ಎಂದು ಕೋರಿ ವಕೀಲ ಎನ್‌.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿದೆ.

‘ವಿದ್ಯುತ್ ಹೈಟೆನ್ಷನ್ ಕೇಬಲ್‌ಗಳ ಅಡಿಯಲ್ಲಿ 7 ಸಾವಿರಕ್ಕೂ ಹೆಚ್ಚು ಮನೆಗಳಿವೆ. 500ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರಾಣಹಾನಿ ಆದರೂ ಅದನ್ನು ತಡೆಯಲು ಬಿಬಿಎಂಪಿ ಮತ್ತು ಬೆಸ್ಕಾಂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ADVERTISEMENT

‘ಇಂಟರ್‌ನೆಟ್ ಸೇವೆ ಮತ್ತು ಟಿವಿ ಕೇಬಲ್ ಪೂರೈಕೆದಾರರು ಎಳೆಯುವ ಕೇಬಲ್‌ಗಳು ವಿಶೇಷವಾಗಿ ಪಾದಚಾರಿಗಳಿಗೆ ಅಪಾಯವನ್ನುಂಟು ಮಾಡುತ್ತಿವೆ’ ಎಂದು ಅರ್ಜಿದಾರರು ವಾದಿಸಿದರು.

‘ಈ ಸಮಸ್ಯೆಯನ್ನು ಬಿಬಿಎಂಪಿ ಮತ್ತು ಬೆಸ್ಕಾಂ ಗಂಭೀರವಾಗಿ ಪರಿಗಣಿಸಬೇಕು. ಕೇಬಲ್ ಚಟುವಟಿಕೆಯನ್ನು ಯಾವ ರೀತಿಯಲ್ಲಿ ನಿಯಂತ್ರಿಸಬಹುದು ಎಂಬುದನ್ನೂ ಪರಿಶೀಲಿಸಬೇಕು. ಪರಿಹಾರ ಮಾರ್ಗೋಪಾಯಗಳನ್ನು 2021ರ ಫೆಬ್ರುವರಿ 3ರಂದು ಸಲ್ಲಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.