ADVERTISEMENT

ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ನೀಡುವ ಧನ ಸಹಾಯ: ಗರಿಷ್ಠ ₹ 5 ಲಕ್ಷಕ್ಕೆ ಏರಿಕೆ

ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ನೆರವು l ನಿರ್ಬಂಧ ಸಡಿಲಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 22:10 IST
Last Updated 3 ಜನವರಿ 2023, 22:10 IST
   

ಬೆಂಗಳೂರು: ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ನೀಡುವ ‘ಧನಸಹಾಯ’ಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೆಲ ನಿರ್ಬಂಧ ಗಳನ್ನು ಕೈಬಿಟ್ಟಿದೆ. ಸಂಸ್ಥೆಯೊಂದಕ್ಕೆ ನೀಡುವ ಗರಿಷ್ಠ ಅನುದಾನದ ಮಿತಿಯನ್ನು ₹ 2 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯು ವಿಧಿಸಿದ ನಿರ್ಬಂಧಗಳ ಬಗ್ಗೆ ಕಳೆದ ನ. 27ರಂದು ‘ಧನಸಹಾಯಕ್ಕೆ ಕಾರ್ಯಕ್ರಮದ ನಿರ್ಬಂಧ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘ–ಸಂಸ್ಥೆಗಳ ಪ್ರಮುಖರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದ್ದರು. ಈಗ ಧನಸಹಾಯಕ್ಕೆ ಸಂಬಂಧಿಸಿದ ನಿಯಮಗಳನ್ನು ಇಲಾಖೆ ಪರಿಷ್ಕರಿಸಿದೆ.

ಮೂರು ವರ್ಷ ನಿರಂತರವಾಗಿ ಅನುದಾನ ಪಡೆಯುವ ಸಂಘ–ಸಂಸ್ಥೆಗಳು ನಾಲ್ಕನೇ ವರ್ಷಕ್ಕೆ ಧನಸಹಾಯ ಪಡೆಯುವಂತಿಲ್ಲ ಎಂಬ ನಿಯಮವನ್ನು ಕೈಬಿಡಲಾಗಿದೆ. ಧನಸಹಾಯ ಪಡೆದು ಆಯೋ ಜಿಸುವ ಕಾರ್ಯಕ್ರಮಗಳ ಮಾಹಿತಿಯನ್ನು ಕಡ್ಡಾಯವಾಗಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕು, ಅವರನ್ನು ಕಡ್ಡಾಯವಾಗಿ
ಕಾರ್ಯಕ್ರಮಕ್ಕೆ ಆಹ್ವಾನಿ
ಸಬೇಕು ಎಂಬ ನಿಯಮವನ್ನೂ ಕೈಬಿಡಲಾಗಿದೆ.

ADVERTISEMENT

ನಿಗದಿತ ಅವಧಿಯೊಳಗೆ ದಾಖಲೆ ಮರು ಸಲ್ಲಿಸದೇ ಅರ್ಜಿ ತಿರಸ್ಕೃತಗೊಂಡಲ್ಲಿ, ತಾಂತ್ರಿಕ ಕಾರಣದಿಂದ ಸೇವಾಸಿಂಧು ತಂತ್ರಾಂಶದಲ್ಲಿ ದಾಖಲೆ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ, ಸದರಿ ದಾಖಲೆಗಳನ್ನು ಭೌತಿಕವಾಗಿ ಜಿಲ್ಲಾ ಸಮಿತಿ ಮುಂದೆ ಮಂಡಿಸಬೇಕು ಎಂದು ತಿಳಿಸಲಾಗಿದೆ. ಹಿಂದೆ ಮರುಸಲ್ಲಿಸಲು 10 ದಿನ ಸಮಯ ನೀಡಲಾಗಿತ್ತು.

ಕಾರ್ಯಕ್ರಮ ನಿರ್ಬಂಧ ಸಡಿಲಿಕೆ: ಕಾರ್ಯಕ್ರಮದ ವಿಡಿಯೊ, ಫೋಟೊ ಸೇರಿ ಅಗತ್ಯ ದಾಖಲಾತಿಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವಾಗ ತಾಂತ್ರಿಕ ತೊಂದರೆ ಕಾಣಿಸಿ ಕೊಂಡಲ್ಲಿ, ಸಹಾಯಕ ನಿರ್ದೇಶಕರ ಅಧಿಕೃತ ಇ –ಮೇಲ್ ವಿಳಾಸಕ್ಕೆ ನಿಗದಿತ ದಾಖಲೆಗಳನ್ನು ಕಳುಹಿಸಬಹುದು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಸಂಘ–ಸಂಸ್ಥೆಗಳು ನಿಗದಿತ ಅವಧಿಯೊಳಗೆ ಕನಿಷ್ಠ ಮೂರು ಕಾರ್ಯಕ್ರಮಗಳನ್ನು ನಡೆಸಿರಬೇಕು ಎಂಬ ನಿಯಮವನ್ನೂ ಕೈಬಿಡಲಾಗಿದೆ.

ಇತರೆ ಸಂಘ–ಸಂಸ್ಥೆಗಳ ಸಹಯೋಗ ದೊಂದಿಗೆ ಆಯೋಜಿಸಿದ ಕಾರ್ಯಕ್ರಮ ಗಳನ್ನು ಪರಿಗಣಿಸತಕ್ಕದ್ದಲ್ಲ ಎಂಬ ನಿಯಮವನ್ನು ರದ್ದುಪಡಿಸಲಾಗಿದೆ. ಧನಸಹಾಯ ಪಡೆದು ಏರ್ಪಡಿಸುವ ಕಾರ್ಯಕ್ರಮಗಳನ್ನು ಜೂನ್‌ನಿಂದ ಜನವರಿ ಅಂತ್ಯದೊಳಗೆ ಪೂರ್ಣಗೊಳಿ ಸುವುದು. ಜನವರಿ ನಂತರದ
ಕಾರ್ಯಕ್ರಮಗಳಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಧನಸಹಾಯಕ್ಕೆ ಪರಿಗಣಿಸುವುದು ಸೇರಿ ಕೆಲ ನಿಯಮಗಳನ್ನು ಕೈಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.