ADVERTISEMENT

ಸಕ್ರಾ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಪ್ರಕರಣ

ಬೆಡ್‌ –ಬಿಲ್ ಮಾಹಿತಿ ನೀಡದ ಆಡಳಿತ ಮಂಡಳಿ: ಜಿಲ್ಲಾಧಿಕಾರಿ ದೂರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 21:51 IST
Last Updated 2 ಆಗಸ್ಟ್ 2020, 21:51 IST

ಬೆಂಗಳೂರು: ಕೊರೊನಾ ಸೋಂಕಿತರಿಗೆ ಮೀಸಲಿಟ್ಟ ಬೆಡ್‌ಗಳ ವಿವರ ಹಾಗೂ ಸೋಂಕಿತರಿಂದ ಪಾವತಿಸಿಕೊಂಡ ಬಿಲ್ಲಿನ ಮಾಹಿತಿ ನೀಡದ ಸಕ್ರಾ ಆಸ್ಪತ್ರೆ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಕೊರೊನಾ ವೈರಾಣು ನಿಯಂತ್ರಿಸಲು ಸರ್ಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಆಸ್ಪತ್ರೆ ವಿರುದ್ಧ ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರೇ ಠಾಣೆಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಆರೋಪಿಗಳಾದ ಆಸ್ಪತ್ರೆಯ ಮುಖ್ಯಸ್ಥ ದೀಪಕ್ ಬಲಾನಿ, ದೀಪ್ತಿ ಹಾಗೂ ದೀಪಕ್ ಅಗರಕಡ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿರುವ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು ರಾಜ್ಯ ಸರ್ಕಾರವೇ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಿದೆ. ಐಎಎಸ್ ಅಧಿಕಾರಿ ಉಮಾ ಮಹದೇವನ್ ಹಾಗೂ ಐಪಿಎಸ್ ಅಧಿಕಾರಿ ಸುನೀಲ್ ಅಗರ್‌ವಾಲ್ ಅವರು ನೋಡಲ್ ಅಧಿಕಾರಿ ಎಚ್‌.ಡಿ.ಚನ್ನಕೇಶವ್ ಜೊತೆಯಲ್ಲಿ ಜುಲೈ 29ರಂದು ಸಕ್ರಾ ಆಸ್ಪತ್ರೆಗೆ ಭೇಟಿ ನೀಡಿದ್ದರು’ ಎಂದು ದೂರಿನಲ್ಲಿ ಶಿವಮೂರ್ತಿ ಅವರು ತಿಳಿಸಿದ್ದಾರೆ.

ADVERTISEMENT

‘ಶೇ 50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟ ಅಂಕಿ–ಅಂಶ ಹಾಗೂ ಸೋಂಕಿತರಿಂದ ಚಿಕಿತ್ಸೆಗಾಗಿ ಪಾವತಿಸಿಕೊಂಡಿರುವ ಬಿಲ್‌ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ಅಧಿಕಾರಿಗಳ ತಂಡ ಕೇಳಿತ್ತು. ಆದರೆ, ಆರೋಪಿಗಳಾದ ದೀಪಕ್, ದೀಪ್ತಿ ಹಾಗೂ ದೀಪಕ್ ಯಾವುದೇ ಮಾಹಿತಿ ನೀಡಿಲ್ಲ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಅವರು ದೂರಿನಲ್ಲಿ ಸೂಚಿಸಿದ್ದಾರೆ.

ಸರ್ಕಾರದ ಆದೇಶ ಪಾಲಿಸದ (ಐಪಿಸಿ 188), ಅಪರಾಧ ಸಂಚು ನಡೆಸಿದ (ಐಪಿಸಿ 34) ಆರೋಪ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

* ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡದ ಕಾರಣಕ್ಕೆ ಸಕ್ರಾ ಆಸ್ಪತ್ರೆಯ ಮೂವರು ಮುಖ್ಯಸ್ಥರನ್ನು ಆರೋಪಿಗಳನ್ನಾಗಿಸಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ನಿಶ್ಚಿತ

-ಡಾ. ಕೆ. ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.