ADVERTISEMENT

ಅಕ್ರಮ ಗೋದಾಮು: ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 20:24 IST
Last Updated 15 ನವೆಂಬರ್ 2020, 20:24 IST

ಬೆಂಗಳೂರು: ಮೈಸೂರು ರಸ್ತೆಯ ಬಾಪೂಜಿ ನಗರದಲ್ಲಿದ್ದ ರಾಸಾಯನಿಕ ಕಾರ್ಖಾನೆ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ ಕಾರ್ಮಿಕರೊಬ್ಬರು ಮೃತಪಟ್ಟ ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸರು, ನಗರದಲ್ಲಿರುವ ಅಕ್ರಮ ಗೋದಾಮುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸುತ್ತೋಲೆ ಹೊರಡಿಸಿದ್ದಾರೆ. ‘ನಗರದ ವಸತಿ ಪ್ರದೇಶಗಳಲ್ಲಿ ಅಕ್ರಮ ಗೋದಾಮುಗಳು ಇದ್ದರೆ ಮಾಹಿತಿ ನೀಡಿ’ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಪೊಲೀಸರು, ಅಕ್ರಮ ಗೋದಾಮುಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅಂಥ ಗೋದಾಮು ನಿರ್ಮಿಸಿರುವ ಕಾರ್ಖಾನೆಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಅದನ್ನು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ರವಾನಿಸಲಾಗುವುದು. ನಂತರ, ಎರಡೂ ಇಲಾಖೆಯಿಂದಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹ ತಮ್ಮ ಮನೆ ಅಕ್ಕ–ಪಕ್ಕದಲ್ಲಿ ಯಾವುದಾದರೂ ಅಕ್ರಮ ಗೋದಾಮು ಇದ್ದರೆ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.