ADVERTISEMENT

ಕೆಜಿಎಫ್ ಬಾಬು ಸಹೋದರಿ ಮನೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 18:43 IST
Last Updated 4 ಫೆಬ್ರುವರಿ 2023, 18:43 IST
   

ಬೆಂಗಳೂರು: ಉದ್ಯಮಿ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಸಹೋದರಿ ಶಾಹೀನ್ ತಾಜ್‌ ಮನೆಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಪೀಠೋಪಕರಣ ಹಾಗೂ ಇತರೆ ವಸ್ತುಗಳು ಸುಟ್ಟಿವೆ.

ಘಟನೆ ಸಂಬಂಧ ಸಂಪಂಗಿ ರಾಮನಗರ ಠಾಣೆಗೆ ದೂರು ನೀಡಿರುವ ಶಾಜೀನ್ ತಾಜ್, ‘ರಾಜಕೀಯ ದ್ವೇಷದಿಂದ ನನ್ನ ಮನೆಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ. ಆರ್‌.ವಿ. ಯುವರಾಜ್ ಹಾಗೂ 10 ಮಂದಿ ಮೇಲೆ ಅನುಮಾನವಿದೆ’ ಎಂದಿದ್ದಾರೆ. ಇದರನ್ವಯ ಯುವರಾಜ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಶಾಹೀನ್ ತಾಜ್‌ ಅವರು ಕೆ.ಎಸ್. ಗಾರ್ಡನ್‌ನಲ್ಲಿರುವ ಮನೆಯಲ್ಲಿ 25 ವರ್ಷಗಳಿಂದ ವಾಸವಿದ್ದಾರೆ. ಶುಕ್ರವಾರ ತಡರಾತ್ರಿ ಏಕಾಏಕಿ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕೆಜಿಎಫ್‌ ಬಾಬುವನ್ನು ಕ್ಷೇತ್ರ ಬಿಟ್ಟು ಕಳುಹಿಸಬೇಕು. ಇಲ್ಲದಿದ್ದರೆ, ಕೊಲೆ ಮಾಡುತ್ತೇನೆ’ ಎಂಬುದಾಗಿ ಯುವರಾಜ್ ಹಾಗೂ ಇತರರು ಬೆದರಿಕೆಯೊಡ್ಡಿದ್ದರೆಂದು ಶಾಹೀನ್ ದೂರಿದ್ದಾರೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ತಿಳಿಸಿದರು.

ತೇಜೋವಧೆಗಾಗಿ ಸುಳ್ಳು ಆರೋಪ: ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಪ್ರತಿದೂರು ನೀಡಿರುವ ಆರ್‌.ವಿ. ಯುವರಾಜ್, ‘ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕೆಜಿಎಫ್‌ ಬಾಬು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನನ್ನ ತೇಜೋವಧೆಗಾಗಿ ಪಿತೂರಿ ನಡೆಸಿ ಈ ರೀತಿ ಆರೋಪ ಮಾಡಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.