ADVERTISEMENT

ಅಗ್ನಿ ಅವಘಡ: ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 15:51 IST
Last Updated 19 ಫೆಬ್ರುವರಿ 2024, 15:51 IST
<div class="paragraphs"><p>ಅಗ್ನಿ ಅವಘಡ</p></div>

ಅಗ್ನಿ ಅವಘಡ

   

ಬೆಂಗಳೂರು: ಮೈಸೂರು ರಸ್ತೆಯ ರಾಮಸಂದ್ರದಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಬೇಕು ಮತ್ತು ಆಸ್ಪತ್ರೆಯಲ್ಲಿರುವ ಐವರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಸ್ಥಳೀಯ ಶಾಸಕ ಎಸ್‌.ಟಿ. ಸೋಮಶೇಖರ್‌ ವಿಧಾನಸಭೆಯಲ್ಲಿ ಸೋಮವಾರ ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ದುರ್ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ. ಗೃಹ ಸಚಿವರು ಸೇರಿದಂತೆ ಸರ್ಕಾರದಿಂದ ಯಾರೊಬ್ಬರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲು ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮಾತನಾಡಿ, ‘ನಗರದ ಹೊರ ವಲಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಅನಧಿಕೃತವಾಗಿ ಶೆಡ್‌ ನಿರ್ಮಿಸಿ ಏನೇನೋ ಚಟುವಟಿಕೆ ನಡೆಸುತ್ತಾರೆ. ಸರ್ಕಾರ ನಿಗಾ ಇಡಬೇಕು. ಅಂತಹ ಎಲ್ಲ ಶೆಡ್‌, ಆಸ್ತಿಗಳ ಸಮೀಕ್ಷೆ ನಡೆಸಬೇಕು. ಎಲ್ಲವನ್ನೂ ನೋಂದಣಿ ಮಾಡಿಸಿದರೆ ಸರ್ಕಾರಕ್ಕೆ ವರಮಾನವೂ ಬರುತ್ತದೆ’ ಎಂದರು.

ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಏಳು ತಿಂಗಳಲ್ಲಿ ನಗರದಲ್ಲಿ ಐದು ಅಗ್ನಿ ಅವಘಡಗಳು ಸಂಭವಿಸಿವೆ. ಆನೇಕಲ್‌ನಲ್ಲಿ ಪಟಾಕಿ ದುರಂತ ಸಂಭವಿಸಿದ್ದಾಗ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಗಂಭೀರವಾಗಿ ಎಚ್ಚರಿಕೆ ನೀಡಿದ್ದರು. ಆದರೂ, ಉಲ್ಲಂಘನೆ ತಡೆಯಲು ಆಗುತ್ತಿಲ್ಲ. ಹೆಚ್ಚಿನ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸುವ ಅಗತ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.