ADVERTISEMENT

ದೇವಸ್ಥಾನದ ಕೊಠಡಿಯಲ್ಲಿ ಬೆಂಕಿ ಅವಘಡ: ಅರ್ಚಕ ಸಾವು

ನಾಗರಾಜಯ್ಯ ಸಾವಿನಲ್ಲಿ ಅನುಮಾನ: ತನಿಖೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 18:10 IST
Last Updated 25 ನವೆಂಬರ್ 2022, 18:10 IST
ಸಿ. ನಾಗರಾಜಯ್ಯ
ಸಿ. ನಾಗರಾಜಯ್ಯ   

ಬೆಂಗಳೂರು: ಜಯನಗರ 4ನೇ ಹಂತದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತೀವ್ರ ಗಾಯಗೊಂಡಿದ್ದ ದೇವಸ್ಥಾನದ ಅರ್ಚಕ ಸಿ. ನಾಗರಾಜಯ್ಯ (61) ಎಂಬುವವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

‘ನಾಗರಾಜಯ್ಯ ಅವರು 35 ವರ್ಷಗಳಿಂದ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ನ. 18ರಂದು ದೇವಸ್ಥಾನಕ್ಕೆ ಬೇಕಾಗಿದ್ದ ಪ್ರಸಾದ ಸಿದ್ಧಪಡಿಸುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ ಗಾಯಗೊಂಡಿದ್ದ ನಾಗರಾಜಯ್ಯ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನ. 23ರಂದು ಬೆಳಿಗ್ಗೆ ತೀರಿಕೊಂಡಿದ್ದಾರೆ’ ಎಂದು ಜಯನಗರ ಪೊಲೀಸರು ಹೇಳಿದರು.

‘ನಾಗರಾಜಯ್ಯ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ. ಇದು ಅನುಮಾನಾಸ್ಪದ ಸಾವು ಎಂದೂ ಕೆಲವರು ಆರೋಪಿಸುತ್ತಿದ್ದಾರೆ. ಅವಘಡ ಆಕಸ್ಮಿಕವೋ ಅಥವಾ ಬೇರೆ ಏನಾದರೂ ಕಾರಣವಿದೆಯೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ತಿಳಿಸಿದರು.

ADVERTISEMENT

ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ: ‘ದೇವಸ್ಥಾನದ ಒಳಭಾಗದಲ್ಲೇ ಕೊಠಡಿ ಇದೆ. ಕೊಠಡಿಗೆ ಹೋಗಿದ್ದ ನಾಗರಾಜಯ್ಯ, ಪ್ರಸಾದ ತಯಾರಿಸಲು ಸಿದ್ಧರಾಗಿದ್ದರು. ಅಡುಗೆ ಅನಿಲ ಸಿಲಿಂಡರ್ ಆನ್ ಮಾಡಿದ್ದರು. ಆದರೆ, ಅಕ್ಕ–ಪಕ್ಕದಲ್ಲಿ ಲೈಟರ್ ಹಾಗೂ ಬೆಂಕಿಪೊಟ್ಟಣ ಇರಲಿಲ್ಲ. ಅದಕ್ಕಾಗಿ ಹುಡುಕಾಟ ಆರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲ ನಿಮಿಷಗಳ ನಂತರ ಸಿಕ್ಕ ಬೆಂಕಿ ಪೊಟ್ಟಣದಲ್ಲಿದ್ದ ಕಡ್ಡಿಯನ್ನು ಗೀರಿದ್ದರು. ಅದಕ್ಕೂ ಮುನ್ನವೇ ಕೊಠಡಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿತ್ತು. ಕಡ್ಡಿ ಗೀರುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ನಾಗರಾಜಯ್ಯ ಅವರ ಮೈಗೂ ಬೆಂಕಿ ಹೊತ್ತಿಕೊಂಡಿತ್ತು. ರಕ್ಷಣೆಗಾಗಿ ಚೀರಾಡಿದ್ದರು.’

‘ಸಹಾಯಕ್ಕೆ ಹೋಗಿದ್ದ ಬಸವರಾಜ್ ಹಾಗೂ ರವಿ ಎಂಬುವವರು ನಾಗರಾಜಯ್ಯ ಅವರನ್ನು ಕೊಠಡಿಯಿಂದ ಹೊರಗೆ ತಂದು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ, ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.