ADVERTISEMENT

ವಿಧಾನಸೌಧ ಅಸುರಕ್ಷಿತ: ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಎಚ್ಚರಿಕೆ

ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ l 12 ಕಟ್ಟಡಗಳ ಮಾಲೀಕರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 5:01 IST
Last Updated 21 ಸೆಪ್ಟೆಂಬರ್ 2019, 5:01 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ರಾಜ್ಯದ ಶಕ್ತಿಸೌಧವಾಗಿರುವ ವಿಧಾನಸೌಧ ಹಾಗೂ ಪಕ್ಕದಲ್ಲೇ ಇರುವ ವಿಕಾಸಸೌಧ ಮತ್ತು ಎಂ.ಎಸ್.ಬಿಲ್ಡಿಂಗ್ ಕಟ್ಟಡಗಳು ಅಸುರಕ್ಷಿತವಾಗಿರುವ ಬಗ್ಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಎಚ್ಚರಿಕೆ ನೀಡಿದೆ.

ಈ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ ಇದ್ದು, ಆ ಬಗ್ಗೆ ಚರ್ಚಿಸಲು ಗೃಹ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಸಿಂಗ್ ಅವರು ಶನಿವಾರ ಅಧಿಕಾರಿಗಳ ಸಭೆ ಕರೆದಿದ್ದಾರೆ.

‘ಹೆಚ್ಚು ಜನರು ಬಂದುಹೋಗುವ ವಿಧಾನಸೌಧದಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದೆ. ಅದನ್ನು ಪತ್ತೆ ಹಚ್ಚಿ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಭೆಯಲ್ಲಿ ಆ ಬಗ್ಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿ ಸುನಿಲ್ ಅಗರವಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಗ್ನಿ ಸುರಕ್ಷತಾ ಕ್ರಮಗಳ ಅಳವಡಿಕೆ ಬಗ್ಗೆ 2016ರಲ್ಲಿ ರಾಷ್ಟ್ರೀಯ ಕಟ್ಟಡ ನೀತಿ ರೂಪಿಸಲಾಗಿದೆ. ಈ ನೀತಿ ಜಾರಿಗೆ ಬರುವ ಮುನ್ನವೇ ವಿಧಾನಸೌಧ ಹಾಗೂ ವಿಕಾಸಸೌಧಗಳನ್ನು ನಿರ್ಮಿಸಲಾಗಿದೆ. ಹೀಗಾಗಿ, ಕಟ್ಟಡದಲ್ಲಿ ಹೆಚ್ಚಿನ ಮಾರ್ಪಾಡು ಮಾಡಲು ಆಗದು. ಆದರೆ, ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಈ ಅಂಶವನ್ನೇ ಹಿರಿಯ ಅಧಿಕಾರಿಗಳಿಗೂ ಹೇಳಿದ್ದೇವೆ’ ಎಂದು ವಿವರಿಸಿದರು

400ಕ್ಕೂ ಹೆಚ್ಚು ಕಟ್ಟಡಗಳಿಗೆ ನೋಟಿಸ್: ‘ಅವಘಡಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ಅಸುರಕ್ಷಿತ ಕಟ್ಟಡಗಳನ್ನು ಪತ್ತೆ ಮಾಡುತ್ತಿದ್ದಾರೆ. ಅಂಥ 400ಕ್ಕೂ ಹೆಚ್ಚು ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ’ ಎಂದು ಅಗರವಾಲ್ ಹೇಳಿದರು.

‘ವಿಕ್ಟೋರಿಯಾ, ಬೌರಿಂಗ್‌ ಸೇರಿ 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ,ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು, ಪಬ್, ಬಾರ್ ಹಾಗೂ ಹಲವು ಕಚೇರಿಗಳಿಗೆ ನೋಟಿಸ್ ಕೊಟ್ಟಿದ್ದೇವೆ. ಕೆಲ ಕಟ್ಟಡಗಳಲ್ಲಿಸುರಕ್ಷತಾ ಕ್ರಮಗಳನ್ನು ಅಳವಡಿಸುವ ಕೆಲಸ ಹಂತ ಹಂತವಾಗಿ ಆಗುತ್ತಿದೆ’ ಎಂದರು.

ಕ್ರಿಮಿನಲ್ ಮೊಕದ್ದಮೆ: ‘ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ. ಇಂದಿರಾನಗರದಲ್ಲಿರುವ 12 ಕಟ್ಟಡಗಳ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಅಗರವಾಲ್ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.