ಬೆಂಗಳೂರು: ದೀಪಾವಳಿ ಹಬ್ಬ ಕಳೆದು ಎರಡು ತಿಂಗಳು ಕಳೆದಿದ್ದರೂ ಈಗಲೂ ಹಲವು ಬಡಾವಣೆ, ಪ್ರಮುಖ ರಸ್ತೆ, ಪುಟ್ಟ ಗಲ್ಲಿಗಳು, ಅಪಾರ್ಟ್‌ಮೆಂಟ್‌ನ ಚಾವಣಿ, ನಿರ್ಜನ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ಪಟಾಕಿಗಳು ಸದ್ದು ಮಾಡುತ್ತಿದ್ದು, ಜನರ ನಿದ್ದೆಗೆಡಿಸಿವೆ.
ಜನವಸತಿ ಪ್ರದೇಶಗಳಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಕೆಲವು ಯುವಕರು ರಾತ್ರಿ ಪಟಾಕಿ ಸಿಡಿಸಿ ಹುಚ್ಚಾಟ ನಡೆಸುತ್ತಿರುವ ಪರಿಣಾಮ ವೃದ್ಧರು, ರೋಗಿಗಳು ಹಾಗೂ ಪುಟ್ಟ ಮಕ್ಕಳಿಗೆ ಆಪತ್ತು ತರುತ್ತಿದೆ. ಇದು ನಗರದ ವಾಯು ಮಾಲಿನ್ಯ ಹೆಚ್ಚಳಕ್ಕೂ ಕಾರಣವಾಗುತ್ತಿದೆ.
ಯುವಕರು ಮೋಜಿಗಾಗಿ ಹಾಗೂ ಮದ್ಯದ ನಶೆಯಲ್ಲಿ ಪಟಾಕಿ ಸಿಡಿಸುತ್ತಿದ್ದು, ತೊಂದರೆ ಆಗುತ್ತಿದೆ ಎಂದು ಹಲವು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಬಸವನಗುಡಿ, ಎನ್.ಆರ್. ಕಾಲೊನಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಪದ್ಮನಾಭ ನಗರ, ಕೆ.ಆರ್. ಮಾರುಕಟ್ಟೆ ಸುತ್ತಮುತ್ತ, ಚಾಮರಾಜಪೇಟೆ, ಹುಳಿಮಾವು, ಇಂದಿರಾನಗರ, ಕೆಂಗೇರಿ, ದಾಸರಹಳ್ಳಿ, ವಿಜಯನಗರ, ಮೈಕೊ ಲೇಔಟ್, ಚಂದ್ರಾ ಲೇಔಟ್, ನಾಗವಾರ, ಲಗ್ಗೆರೆ, ಕೋಣನಕುಂಟೆ, ವಿದ್ಯಾರಣ್ಯಪುರ, ಸುಂಕದಕಟ್ಟೆ, ಕೆಆರ್ ಪುರ, ವೈಟ್‌ಫೀಲ್ಡ್... ಹೀಗೆ ಹಲವು ಬಡಾವಣೆಗಳಲ್ಲಿ ರಾತ್ರಿ ಪಟಾಕಿಗಳ ಸದ್ದು ಜನರ ನೆಮ್ಮದಿಗೆ ಭಂಗ ತರುತ್ತಿದೆ.
ಹಬ್ಬ, ಜಾತ್ರೆ, ದೇವರ ಉತ್ಸವದ ವೇಳೆ ಆಯೋಜಕರು ಪೊಲೀಸರ ಅನುಮತಿ ಪಡೆದು ರಾತ್ರಿ ವೇಳೆ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಅಳವಡಿಕೆ ಮಾಡುತ್ತಾರೆ. ಯಾವುದೇ ಉತ್ಸವಗಳು ಇಲ್ಲದಿದ್ದರೂ ಪಟಾಕಿ ಸಿಡಿಸುತ್ತಿರುವುದು ಈಗ ಕಂಡುಬರುತ್ತಿದೆ. ರಾಜಕಾರಣಿಗಳ ಮನೆಗಳ ಎದುರು ಪಟಾಕಿ ಸದ್ದು ಈಗಲೂ ಜೋರಾಗಿದೆ ಎಂದು ವೃದ್ಧರು ಅಳಲು ತೋಡಿಕೊಂಡಿದ್ದಾರೆ.
‘ರಾತ್ರಿ ವೇಳೆ ಈ ರೀತಿಯ ಕೃತ್ಯಕ್ಕೆ ಪೊಲೀಸರು ಕಡಿವಾಣ ಹಾಕಬೇಕು. ಪ್ರಯಾಣಿಕರನ್ನು ಕರೆದೊಯ್ಯುವ ವೇಳೆ ಗಲ್ಲಿಗಳಲ್ಲಿ ಸುಮ್ಮನೆ ಪಟಾಕಿ ಸಿಡಿಸುತ್ತಾರೆ. ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿರುವುದಿಲ್ಲ. ಎಲ್ಲಿ ಆಟೊಗಳ ಮೇಲೆ ಪಟಾಕಿ ಎಸೆಯುತ್ತಾರೆಯೋ ಎನ್ನುವ ಭಯ ಕಾಡುತ್ತದೆ. ಹುಚ್ಚಾಟ ನಡೆಸುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಟೊ ಚಾಲಕ ಲೋಕೇಶ್ ಆಗ್ರಹಿಸಿದರು.
ಪುಂಡರ ಹುಚ್ಚಾಟದಿಂದ ಹಲವು ಅನಾಹುತಗಳು ಸಂಭವಿಸುತ್ತಿವೆ. ಅಕ್ಕಪಕ್ಕದ ನಿವಾಸಿಗಳಿಗೂ ತೊಂದರೆ ಆಗುತ್ತಿದೆ. ಪರೀಕ್ಷಾ ಸಂದರ್ಭಗಳಲ್ಲಿ ಮಕ್ಕಳ ಓದಿಗೂ ಅಡಚಣೆ ಉಂಟಾಗುತ್ತಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಪಟಾಕಿ ಸಿಡಿಸುವಾಗ ಸ್ನೇಹಿತರ ಸವಾಲು ಸ್ವೀಕರಿಸಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಪಟಾಕಿ ಹಚ್ಚುವಾಗ ಡಬ್ಬದ ಮೇಲೆ ಕುಳಿತರೆ ಆಟೊ ಕೊಡಿಸುವುದಾಗಿ ಆರೋಪಿಗಳು ವ್ಯಕ್ತಿಯೊಬ್ಬರಿಗೆ ಆಮಿಷ ಒಡ್ಡಿದ್ದರು. ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿ ಸವಾಲು ಸ್ವೀಕರಿಸಿ, ಪ್ರಾಣ ಕಳೆದುಕೊಂಡಿದ್ದರು.
ದ್ವಿಚಕ್ರ ವಾಹನ ಓಡಿಸುತ್ತಾ ಪಟಾಕಿಗೆ ಬೆಂಕಿ ಇಟ್ಟು ಎಸೆಯುತ್ತಾ ಪುಂಡಾಟ ನಡೆಸಿದ್ದ ಘಟನೆ ಇತ್ತೀಚೆಗೆ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ನಡೆದಿತ್ತು. ಆರೋಪಿಗಳನ್ನು ಪತ್ತೆಹಚ್ಚಿದ್ದ ಪೊಲೀಸರು, ಇಬ್ಬರನ್ನು ಬಂಧಿಸಿದ್ದರು. ಕಿಡಿಗೇಡಿಗಳು ಈ ರೀತಿ ಪುಂಡಾಟ ನಡೆಸಿ ಬೇರೆಯವರಿಗೆ ಆಪತ್ತು ತರುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವು ಯುವಕರು ಮದ್ಯ ಸೇವಿಸಿ ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಳ್ಳಲು ರಾತ್ರಿ ವೇಳೆ ಪಟಾಕಿ ಸಿಡಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದಾಸರಹಳ್ಳಿಯ ನಿವಾಸಿ ಜ್ಯೋತಿ ದೂರಿದರು.
ಈ ರೀತಿ ಪಟಾಕಿ ಸಿಡಿಸುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗುತ್ತಿದೆ. ಶಬ್ದ ಮಾಲಿನ್ಯದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಸಂಕಟಪಡುತ್ತಿದ್ದಾರೆ ಎಂದು ವೈದ್ಯರು ಹೇಳಿದರು.
ರಾತ್ರಿ ವೇಳೆ ಪಟಾಕಿ ಸಿಡಿಸಿ ತೊಂದರೆ ನೀಡುತ್ತಿದ್ದರೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಜನ್ಮ ದಿನಾಚರಣೆ, ಹೊಸ ವರ್ಷ, ಮದುವೆ ಸಮಾರಂಭಗಳ ಹೆಸರಿನಲ್ಲಿ ರಾತ್ರಿ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವುದರಿಂದ ಮಲಗಿರುವ ಮಕ್ಕಳು, ಹಿರಿಯರು, ಪ್ರಾಣಿ– ಪಕ್ಷಿಗಳು ಎಚ್ಚರಗೊಂಡು ಗಾಬರಿಗೂಳ್ಳುತ್ತಿವೆ.
ಕೆ.ತೇಜಸ್ವಿನಿ, ಕಲ್ಕೆರೆ
Actions Image
ಹೆಚ್ಚುತ್ತಿರುವ ಶಬ್ದ ಮಾಲಿನ್ಯದಿಂದ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಟಾಕಿ ಸಿಡಿಸುವುದು, ಡಿ.ಜೆ ಶಬ್ದದಿಂದ ಅನೇಕರಿಗೆ ಕಿರಿಕಿರಿ ಆಗುತ್ತಿದೆ.
ಮಧುಶ್ರೀ ಪಾಟೀಲ್, ಕೆ.ಆರ್. ಪುರ
ಮಧುಶ್ರೀ
ನಗರದ ವಾತಾವರಣ ಹೆಚ್ಚು ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ. ದೆಹಲಿ ಸರ್ಕಾರ ಪಟಾಕಿ ನಿಷೇಧಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ನಮ್ಮ ರಾಜ್ಯದಲ್ಲಿ ಇನ್ನಾದರೂ ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಉಳಿದ ಸಂದರ್ಭದಲ್ಲಿ ಹಸಿರು ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನೂ ನಿಷೇಧಿಸಬೇಕು.
ಕೆ.ಜಿ.ಕುಮಾರ್, ಅಧ್ಯಕ್ಷ, ಹಸಿರು ಪ್ರತಿಷ್ಠಾನ
ಸಭೆ, ಸಮಾರಂಭಗಳು ಮತ್ತು ಗಣ್ಯರನ್ನು ಸ್ವಾಗತಿಸಲು ವಿನಾಕಾರಣ ಪಟಾಕಿ ಸಿಡಿಸಿ ಪರಿಸರ ಹಾಳು ಮಾಡಲಾಗುತ್ತಿದೆ. ರಾತ್ರಿ ನಡೆಯುವ ಕಾರ್ಯಕ್ರಮಗಳಲ್ಲಿ ಪಟಾಕಿ ಹಾವಳಿ ತೀವ್ರವಾಗಿದೆ. ದೀಪಾವಳಿ ಹೊರತು ಪಡಿಸಿ ಬೇರೆ ಸಂದರ್ಭದಲ್ಲಿ ಪಟಾಕಿ ಮಾರಾಟವನ್ನೇ ನಿಷೇಧಿಸಬೇಕು. ಪಟಾಕಿ ಸಂಗ್ರಹಿಸಿರುವ ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಬೇಕು.
ಭರತ್ ಸೌಂದರ್ಯ, ವಿದ್ಯಾಮಾನ್ಯ ವಿದ್ಯಾಕೇಂದ್ರ ಶಾಲೆ, ಅಂದ್ರಹಳ್ಳಿ ಮುಖ್ಯರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.