ADVERTISEMENT

ಬೆಂಗಳೂರಿನಿಂದ ಸ್ಯಾನ್‌ ಫ್ರಾನ್ಸಿಸ್ಕೊಗೆ ನೇರ ವಿಮಾನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 15:44 IST
Last Updated 26 ನವೆಂಬರ್ 2020, 15:44 IST
ಸಾಂಕೇತಿಕ
ಸಾಂಕೇತಿಕ   

ಬೆಂಗಳೂರು: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊಗೆ ನೇರ ವಿಮಾನ ಸಂಚಾರ ಆರಂಭಿಸಲಿದೆ. 2021ರ ಜ.11ರಿಂದ ಸೇವೆ ಆರಂಭವಾಗಲಿದೆ.

ವಾರಕ್ಕೆ ಎರಡು ಬಾರಿ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ನ.25ರಿಂದಲೇ ಬುಕ್ಕಿಂಗ್‌ ಆರಂಭವಾಗಿದ್ದು, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಬಹುದು.

ಏರ್‌ ಇಂಡಿಯಾದ ವಿಮಾನಗಳು ಪ್ರಯಾಣಿಸಲಿರುವ ತಡೆರಹಿತ ಅತಿ ದೀರ್ಘ ಮಾರ್ಗ ಇದಾಗಿದೆ. ಅಲ್ಲದೆ, ಭಾರತದಿಂದ ವಿದೇಶಕ್ಕೆ ಪ್ರಯಾಣಿಸುವ ಅತಿ ದೀರ್ಘ (14,000 ಕಿ.ಮೀ) ಮಾರ್ಗವೂ ಇದಾಗಿದೆ. ಏರ್‌ ಇಂಡಿಯಾದ 238 ಆಸನಗಳ ಬೋಯಿಂಗ್‌ 777–200 ಪ್ರಯಾಣಿಕ ವಿಮಾನವು ಈ ಸೇವೆಯನ್ನು ಒದಗಿಸಲಿದೆ ಎಂದು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪ್ರಕಟಣೆ ತಿಳಿಸಿದೆ.

ADVERTISEMENT

‘ವಿಶ್ವದ ಸಿಲಿಕಾನ್‌ ವ್ಯಾಲಿ ಎನಿಸಿರುವ ಸ್ಯಾನ್‌ ಫ್ರಾನ್ಸಿಸ್ಕೊಗೆ, ದೇಶದ ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರಿನಿಂದ ನೇರವಿಮಾನ ಸೌಲಭ್ಯ ಪ್ರಾರಂಭವಾಗಿರುವುದು ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ತಾಂತ್ರಿಕವಾಗಿ ಹೆಚ್ಚು ಮುಂದುವರಿದಿರುವ ವಿಶ್ವದ ಅಗ್ರ 45 ನಗರಗಳ ಪಟ್ಟಿಯಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಬೆಂಗಳೂರು ಮೊದಲೆರಡು ಸ್ಥಾನದಲ್ಲಿವೆ. ಹೊಸ ಸೇವೆಯಿಂದ ಉಭಯ ನಗರಗಳ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಸಾಕಷ್ಟು ಲಾಭ ಆಗುತ್ತವೆಯಲ್ಲದೆ, ಅಮೆರಿಕದೊಂದಿಗೆ ಸಂಪರ್ಕ ಸೌಲಭ್ಯ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.