ADVERTISEMENT

ಪಕ್ಷ ನಿಷ್ಠರಿಗೆ ಮೊದಲ ಆದ್ಯತೆ: ಡಿಕೆಶಿ

‘ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 22:00 IST
Last Updated 16 ಮಾರ್ಚ್ 2020, 22:00 IST
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು ಹೀಗೆ- --------ಪ್ರಜಾವಾಣಿ ಚಿತ್ರ
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು ಹೀಗೆ- --------ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಕ್ಷದ ಶಿಸ್ತು ಪಾಲನೆ ಮಾಡುವವರಿಗೆ ಮೊದಲ ಆದ್ಯತೆ ನೀಡಿ, ಪಕ್ಷ ನಿಷ್ಠೆ ತೋರುವವರಿಗೆ ಸೂಕ್ತ ಸ್ಥಾನ
ಮಾನ ನೀಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮವರ ಜತೆ ಮಾತನಾಡಿದರು.

‘ನಾವು ಜಾತಿ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಎಲ್ಲ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯುವ ಯತ್ನ ಮಾಡುತ್ತೇವೆ. ನಮಗೆ ಸಂಖ್ಯಾಬಲಕ್ಕಿಂತ ಗುಣಬಲ ಇರುವ ನಾಯಕರು ಬೇಕಾಗಿದೆ ಎಂದು ಹೇಳಿದರು.

ADVERTISEMENT

‘ನಮ್ಮ ನಾಲ್ವರ ಮೇಲೆ ವಿಶ್ವಾಸ ಇಟ್ಟಿರುವ ಹೈಕಮಾಂಡ್‌ ಈ ಸ್ಥಾನ ನೀಡಿದೆ. ಇದು ಹೊಸ ತಂಡಕ್ಕೆ ನೀಡಿದ ಅಧಿಕಾರವಲ್ಲ.. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ, ತಳಮಟ್ಟದಿಂದ ಪಕ್ಷ ಕಟ್ಟಲು ನಾವು ಇಂದು ನಿರ್ಧಾರ ಮಾಡಿದ್ದೇವೆ. ’ ಎಂದು ಹೇಳಿದರು.

‘ದೇಶದ ಎಲ್ಲ ಕಡೆಗಳಲ್ಲಿ ಅಧಿಕಾರ ಸಿಕ್ಕಿದರೂ ಬಿಜೆಪಿ ನಾಯಕರಿಗೆ ತೃ‍ಪ್ತಿಯಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ಕಡೆಗಳಲ್ಲಿ ನಮ್ಮ ನಾಯಕರನ್ನು ಸೆಳೆದುಕೊಳ್ಳುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಮ್ಮ ನಾಯಕರು, ಕಾರ್ಯಕರ್ತರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ’ ಎಂದು ವಿವರಿಸಿದರು.

ಭಿನ್ನಾಭಿಪ್ರಾಯ ಇಲ್ಲ:‘ನನ್ನನ್ನು ಪಕ್ಷದ ಅಧ್ಯಕ್ಷರಾಗಿ ನೇಮಿಸಬೇಕು ಎಂದು ಎಂ.ಬಿ. ಪಾಟೀಲರು ಸೇರಿ ಎಲ್ಲ ನಾಯಕರು ಸೂಚಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದರು.

ಪಾಟೀಲರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಮ್ಮಲ್ಲಿ ಯಾವುದೇ ವ್ಯಕ್ತಿಗತ ವಿಚಾರವಿಲ್ಲ. ಸಿದ್ಧಾಂತದ ಆಧಾರದ ಮೇಲೆ ನಾವು ಪಕ್ಷದಲ್ಲಿ ಇದ್ದೇವೆ. ಅವರ ತಂದೆ ಇದ್ದಾಗ ನಾನು ಶಾಸಕನಾಗಿದ್ದೆ’ ಎಂದು ಅವರು ನೆನಪಿಸಿಕೊಂಡರು.

‘ದಿನೇಶ್ ಗುಂಡೂರಾವ್ ರಾಜೀ
ನಾಮೆ ನೀಡಿದ ಬಳಿಕ ಪಕ್ಷದ ವೀಕ್ಷ
ಕರು ರಾಜ್ಯಕ್ಕೆ ಭೇಟಿ ನೀಡಿದ್ದರು.ಆಗ ಶೇ 99ರಷ್ಟು ನಾಯಕರು ನನ್ನ ಹೆಸ
ರನ್ನೇ ಸೂಚಿಸಿದ್ದಾರೆ. ನಮ್ಮಲ್ಲಿ ಸ್ಪರ್ಧೆ, ಭಿನ್ನಾಭಿಪ್ರಾಯ ಇಲ್ಲ. ಈ ಬಗ್ಗೆ ಮಾಧ್ಯಮ
ದವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಎಲ್ಲ ಊಹಾ
ಪೋಹಗಳಿಗೆ ಇಂದು ತೆರೆ ಎಳೆಯುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.