ಬೆಂಗಳೂರು: ರೌಡಿ ಶೀಟರ್ ಮೊಹಮ್ಮದ್ ನಯೀಂ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ವೈಟ್‌ಫೀಲ್ಡ್ ವಿಭಾಗದ ಎಚ್ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಟಿ.ಎಸ್.ಶಫೀಕ್ (25), ಶೇಖ್ ಸದ್ದಾಂ ಹುಸೇನ್ (27), ಯತೀಶ್ (29), ಇರ್ಫಾನ್ ಪಾಷಾ (27) ಹಾಗೂ ಇಮ್ರಾನ್ ಖಾನ್ (26) ಬಂಧಿತ ಆರೋಪಿಗಳು.
ಮಾರುತಿನಗರದ ಸೊನ್ನೇನಹಳ್ಳಿ ಎಂಟನೇ ಕ್ರಾಸ್‌ನ ನಿವಾಸಿ ಮೊಹಮ್ಮದ್ ನಯೀಂ (26) ಎಂಬಾತನನ್ನು ಹಳೇ ದ್ವೇಷದಿಂದ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ನಯೀಂ ಅವರ ತಂದೆ ಮೊಹಮ್ಮದ್ ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಮೊಹಮ್ಮದ್ ನಯೀಂ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಪ್ರಕರಣದ ಒಂದನೇ ಆರೋಪಿ ಶಫೀಕ್ ವಿರುದ್ಧ ಎಚ್‌ಎಎಲ್ ಹಾಗೂ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು ಈತನ ವಿರುದ್ಧ ರೌಡಿ ಶೀಟರ್ ತೆರೆಯುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ನಯೀಂ, ಅನ್ನಸಂದ್ರಪಾಳ್ಯದಲ್ಲಿರುವ ತನ್ನ ಚಿಕ್ಕಮ್ಮ ಶಾಹೀನಾ ಬಾನು ಅವರ ಮನೆಗೆ ಹೋಗಿ ವಾಪಸ್ ಬರುತ್ತಿದ್ದರು. ಆಗ ನಯೀಂ ಅವರನ್ನು ಅಡ್ಡಗಟ್ಟಿದ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.