ADVERTISEMENT

ಅನುಮತಿ ಇಲ್ಲದೆ ರಸ್ತೆ ಅಗೆದ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:22 IST
Last Updated 23 ಆಗಸ್ಟ್ 2019, 20:22 IST

ಬೆಂಗಳೂರು: ಅನುಮತಿ ಪಡೆಯದೆ ರಸ್ತೆ ಅಗೆದಿದ್ದಲ್ಲದೆ, ಅದನ್ನು ಪ್ರಶ್ನಿಸಿದ ಬಿಬಿಎಂಪಿ ಅಧಿಕಾರಿಗೂ ಬೆದರಿಕೆ ಹಾಕಿದ ಆರೋಪದ ಮೇಲೆ ಐವರನ್ನು ‍ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಐವರು ಬುಧವಾರ ರಸ್ತೆ ಅಗೆದು ಡೇಟಾ ಕೇಬಲ್‌ ಹಾಕುತ್ತಿದ್ದರು. ಇದಕ್ಕೆ ಪರವಾನಗಿ ಪಡೆಯಲಾಗಿದೆಯೇ ಎಂದು ಅವರನ್ನು ಬಿಬಿಎಂಪಿ ಅಧಿಕಾರಿ ಪ್ರಶ್ನಿಸಿದರು. ಆಗ ‘ನಿನ್ನ ಕೆಲಸ ನೀನು ನೋಡಿಕೊ’ ಎಂದು ಬೆದರಿಕೆ ಹಾಕಿದ್ದಾಗಿ ಅಧಿಕಾರಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮಣಿ, ರಮೇಶ್‌, ಪ್ರೇಮ್‌ಕುಮಾರ್, ಕಿರಣ್‌ ಹಾಗೂ ದ್ವಾರಕ ಯಾದವ್‌ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಇವರು ಟಾಟಾ ಟೆಲಿಕಮ್ಯುನಿಕೇಶನ್‌ ಡೇಟಾ ಕೇಬಲ್‌ ಅನ್ನು ಪ್ರೇಮ್‌ ನಗರದಲ್ಲಿ ಅಳವಡಿಸುತ್ತಿದ್ದಾಗ ಲಗ್ಗೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಶ್ನಿಸಿದ್ದರು ಎನ್ನಲಾಗಿದೆ.

ADVERTISEMENT

ಗುರುವಾರ ‍ಪೊಲೀಸರು ಐವರನ್ನು ಬಂಧಿಸಿದರು. ಆರೋಪಿಗಳು ಆಂಧ್ರ ಮೂಲದ ಗುತ್ತಿಗೆದಾರರಾದ ಪ್ರಭಾಕರ್‌ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಆಸ್ತಿಗೆ ಧಕ್ಕೆ ಮಾಡಿದ ಆರೋಪ, ಪ್ರಚೋದನೆ, ಸರ್ಕಾರಿ ಅಧಿಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.