ADVERTISEMENT

ಲಾಕ್‌ಡೌನ್‌: ಮರುಪರಿಶೀಲನೆಗೆ ಎಫ್‌ಕೆಸಿಸಿಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:39 IST
Last Updated 13 ಜುಲೈ 2020, 20:39 IST
ಸಿ.ಆರ್. ಜನಾರ್ಧನ
ಸಿ.ಆರ್. ಜನಾರ್ಧನ   

ಬೆಂಗಳೂರು: ‘ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್‌ಡೌನ್ ಕ್ರಮದಿಂದ ರಾಜ್ಯದ ಸಣ್ಣ ಕೈಗಾರಿಕೆಗಳು ಸಂಪೂರ್ಣವಾಗಿ ನೆಲಕಚ್ಚಲಿದ್ದು, ಈ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಬೇಕು’ ಎಂದು ಎಫ್‌ಕೆಸಿಸಿಐ(ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ) ಅಧ್ಯಕ್ಷ ಸಿ.ಆರ್.ಜನಾರ್ದನ ಹೇಳಿದರು.

ಕಾಸಿಯಾ, ಪೀಣ್ಯ ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಈ ಹಿಂದಿನ 54 ದಿನಗಳ ಲಾಕ್‌ಡೌನ್‌ನಿಂದ ನಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳು ಅದರಿಂದ ಹೊರಬರಲು ಪ್ರಯತ್ನಿಸುತ್ತಿವೆ. ಈ ಸಂದರ್ಭದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್ ಹೇರಿದರೆ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ’ ಎಂದು ತಿಳಿಸಿದರು.

‘ಕೋವಿಡ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೇ ಕೈಗಾರಿಕೆಗಳ ಕಾರ್ಯಾಚರಣೆಗೆ ನಿರ್ಬಂಧ ಹೇರಿಲ್ಲ. ಇದೇನಿಯಮವನ್ನು ರಾಜ್ಯ ಸರ್ಕಾರ ಅನುಸರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಲಾಕ್‌ಡೌನ್ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೈಗಾರಿಕಾ ಸಂಘ– ಸಂಸ್ಥೆಗಳೊಡನೆ ಸರ್ಕಾರ ಚರ್ಚೆ ನಡೆಸಬೇಕು. ಕೈಗಾರಿಕೆಗಳನ್ನು ಲಾಕ್‌ಡೌನ್ ವ್ಯಾಪ್ತಿಯಿಂದ ಹೊರಗಿಡಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆ ಅನಿವಾರ್ಯ

‘ಕೈಗಾರಿಕೆಗಳನ್ನು ಲಾಕ್‌ಡೌನ್ ವ್ಯಾಪ್ತಿಯಿಂದ ಕೈಬಿಡದಿದ್ದರೆ ಪ್ರತಿಭಟನೆಗೆ ಇಳಿಯಲು ಆಲೋಚಿಸಲಾಗಿದೆ’ ಎಂದು ಪೀಣ್ಯ ಕೈಗಾರಿಕಾ ಸಂಘದ ನಿಯೋಜಿತ ಅಧ್ಯಕ್ಷ ಸಿ.ಪ್ರಕಾಶ್ ತಿಳಿಸಿದರು.

‘ಪ್ರತಿ ತಿಂಗಳು 20ರಂದು ಜಿಎಸ್‌ಟಿ ಪಾವತಿಬೇಕು. ಲಾಕ್‌ಡೌನ್ ಇದೆ ಎಂಬ ಕಾರಣಕ್ಕೆ ವಿನಾಯಿತಿ ಸಿಗುವುದಿಲ್ಲ. ವಿದ್ಯುತ್ ಶುಲ್ಕ, ಕಾರ್ಮಿಕರ ವೇತನ, ಬ್ಯಾಂಕ್‌ಗಳಿಗೆ ಸಾಲದ‌ ಕಂತು ಪಾವತಿಸಲೇಬೇಕು. ಇದಕ್ಕೆ ಹೊಣೆಗಾರರು ಯಾರು’ ಎಂದು ಪ್ರಶ್ನಿಸಿದರು.

‘ಜನರ ಜೀವ ಉಳಿಸುವ ಜತೆಗೆ ಜೀವನದ ಬಗ್ಗೆಯೂ ಸರ್ಕಾರ ಆಲೋಚನೆ ಮಾಡಬೇಕು. ಇಲ್ಲದಿದ್ದರೆ ಕೈಗಾರಿಕೋದ್ಯಮಿಗಳು ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.