ADVERTISEMENT

ದಕ್ಕದ ನೆರೆ ಪರಿಹಾರ: ಕೇದಾರ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 19:27 IST
Last Updated 4 ಜನವರಿ 2020, 19:27 IST
ಸಂಸದ ತೇಜಸ್ವಿ ಸೂರ್ಯ ವೇದಿಕೆಯಲ್ಲಿ ಆಸೀನರಾಗಿದ್ದ ಶಿವಾಚಾರ್ಯ ಸ್ವಾಮೀಜಿಗಳಿಗೆ ನಮಿಸಿದ ಕ್ಷಣ. ಕೇದಾರದ ಭೀಮಾಶಂಕರ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದ್ದರು -ಪ್ರಜಾವಾಣಿ ಚಿತ್ರ
ಸಂಸದ ತೇಜಸ್ವಿ ಸೂರ್ಯ ವೇದಿಕೆಯಲ್ಲಿ ಆಸೀನರಾಗಿದ್ದ ಶಿವಾಚಾರ್ಯ ಸ್ವಾಮೀಜಿಗಳಿಗೆ ನಮಿಸಿದ ಕ್ಷಣ. ಕೇದಾರದ ಭೀಮಾಶಂಕರ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಜಲಪ್ರಳಯವಾಗಿ ಜನ ಸಂಕಷ್ಟದಲ್ಲಿದ್ದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೂಕ್ತ ಧನ ಸಹಾಯ ಮಾಡದಿರುವ ಬಗ್ಗೆ ನಮಗೆ ವಿಷಾದ ಎನಿಸುತ್ತಿದೆ’ ಎಂದು ಕೇದಾರ ಪೀಠದ ಭೀಮಾಶಂಕರ ಸ್ವಾಮೀಜಿ ಹೇಳಿದರು.

ಬಸವನಗುಡಿಯಲ್ಲಿ ಶನಿವಾರ ನಡೆದ 7ನೇ ವರ್ಷದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮುಂದಿನ ಮೂರೂವರೆ ವರ್ಷಗಳ ಕಾಲ ಭದ್ರವಾಗಿರಲಿದೆ. ಸಂಘರ್ಷದಿಂದಲೇ ಉತ್ಕರ್ಷ ಸಾಧಿಸಿರುವ ಅವರ ಭಾಗ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದರು.

ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ ಅತಿವೃಷ್ಟಿಯಾಗಿ 500 ಗ್ರಾಮಗಳಲ್ಲಿ ಸರ್ವನಾಶವಾಗಿದೆ. ಇಲ್ಲಿನ ಜನರ ಬದುಕನ್ನು ಪುನಃ ಕಟ್ಟಿಕೊಳ್ಳಲು ಕನಿಷ್ಠ ₹ 30 ಸಾವಿರ ಕೋಟಿಯ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಸದುಪಯೋಗ ಮಾಡಿಕೊಳ್ಳಲಾಗುವುದು’ ಎಂದರು.

ADVERTISEMENT

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಸಿದ್ಧಾಂತ ಶಿಖಾಮಣಿಯ ವೇದಾಂತ ಚಿಂತನೆಗೆ ವೀರಶೈವರು ಒತ್ತು ನೀಡಬೇಕು. ಇದರ ಒಳನೋಟವನ್ನು ಅರಿತರೆ ವೀರಶೈವರು ನಿಜವಾದ ಭಾರತೀಯರಾಗುತ್ತಾರೆ’ ಎಂದರು.

ಇಸ್ರೊದ ನಿಕಟಪೂರ್ವ ಅಧ್ಯಕ್ಷ ಎ.ಎಸ್‌.ಕಿರಣ ಕುಮಾರ್, ‘ನಕ್ಷತ್ರ, ಗ್ರಹಗಳ ಹತ್ತಿರಕ್ಕೆ ಹೋಗುತ್ತಿರುವ ಮನುಷ್ಯ ಕೇವಲ ವಿಜ್ಞಾನದ ಬೆನ್ನು ಹತ್ತಿದರೆ ಸಾಲದು. ತನ್ನ ಅಂತರಂಗದ ಒಳಗೆ ಪ್ರಯಾಣಿಸಲು ಋಷಿ–ಮುನಿಗಳು ತೋರುವ ದಾರಿಯನ್ನು ಅರಿಯಲು ಪ್ರಯತ್ನಿಸಬೇಕು’ ಎಂದರು.

ಸಿ.ಎಂ ಕುರ್ಚಿಗಿಂತಲೂ ಎತ್ತರದಲ್ಲಿ ಪೀಠ..!:ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರು ಕುಳಿತಿದ್ದ ಕುರ್ಚಿಗಳು ಹಿಮವತ್‌ ಕೇದಾರ ಭೀಮಾಶಂಕರ ಸ್ವಾಮೀಜಿ ಕುರ್ಚಿಗಿಂತಲೂ ಎರಡು ಅಡಿಗಳಷ್ಟು ಕೆಳಗೆ ಇದ್ದುದು ಮತ್ತು ಬಸವಣ್ಣನನ್ನು ಯಾರೂ ಸ್ಮರಿಸದೇ ಹೋದುದು ಗಮನಾರ್ಹವಾಗಿತ್ತು. ಯಡಿಯೂರಪ್ಪ ಅವರು 1 ಗಂಟೆ 40 ನಿಮಿಷಗಳ ಕಾಲ ತದೇಕಚಿತ್ತರಾಗಿ ಕುಳಿತು ಕಾರ್ಯಕ್ರಮವನ್ನು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.