ADVERTISEMENT

ಪ್ರವಾಹ ಸ್ಥಿತಿ: ರೋಗದ ಬಗ್ಗೆ ಎಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:35 IST
Last Updated 29 ಜೂನ್ 2025, 15:35 IST
   

ಬೆಂಗಳೂರು: ‘ಪ್ರವಾಹ ಪರಿಸ್ಥಿತಿಯಲ್ಲಿ ನೀರು, ಗಾಳಿ ಹಾಗೂ ಆಹಾರದಿಂದ ಹರಡುವ ರೋಗದ ಬಗ್ಗೆ ಎಚ್ಚರವಹಿಸಬೇಕು’ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ರಾಜ್ಯದ ವಿವಿಧೆಡೆ ಮುಂಗಾರು ಮಳೆ ಬಿರುಸು ಪಡೆದ ಕಾರಣ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿರುವ ಇಲಾಖೆ, ‘‍ಪ್ರವಾಹ ಪರಿಸ್ಥಿತಿಯಲ್ಲಿ ನೀರು, ಗಾಳಿ ಹಾಗೂ ಆಹಾರದಿಂದ ‘ಇನ್‌ಫ್ಲೂಯೆಂಜಾ’ ಜ್ವರ, ಕ್ಷಯ ರೋಗ, ನ್ಯುಮೋನಿಯಾ, ಕಾಲರಾ, ಟೈಫಾಯ್ಡ್, ಅತಿಸಾರ ಸೇರಿ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀರನ್ನು ಕುದಿಸಿ ಅಥವಾ ಶುದ್ಧೀಕರಿಸಿ ಕುಡಿಯಬೇಕು. ಊಟ ಮಾಡುವ ಮೊದಲು ಮತ್ತು ಆಹಾರ ಸೇವಿಸುವ ಮುನ್ನ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಬೇಕು’ ಎಂದು ಹೇಳಿದೆ.

‘ವಿಶೇಷವಾಗಿ ರಾತ್ರಿ ವೇಳೆ ಸೊಳ್ಳೆ ಪರದೆಗಳನ್ನು ಬಳಸಬೇಕು. ಜನಸಂದಣಿ ಇರುವ ಪ್ರದೇಶಗಳಲ್ಲಿ ಮುಖಗವಸನ್ನು ಧರಿಸಬೇಕು. ಭೇದಿ ಕಾಣಿಸಿಕೊಂಡರೆ ಒಆರ್‌ಎಸ್‌ ಸೇವಿಸಬೇಕು. ಆಹಾರವನ್ನು ಮುಚ್ಚಿಡಬೇಕು. ತಾಜಾ ಆಹಾರವನ್ನೇ ಸೇವಿಸಬೇಕು. ನೀರಿನ ಮಾಲಿನ್ಯವನ್ನು ತಪ್ಪಿಸಲು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮಕ್ಕಳಿಗೆ ದಡಾರ, ಟೈಫಾಯ್ಡ್ ಮತ್ತು ಹೆಪಟೈಟಿಸ್ ವಿರುದ್ಧ ರಕ್ಷಣೆ ಒದಗಿಸಲು ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದೆ. 

ADVERTISEMENT

‘ನೆರೆ ಪ್ರದೇಶವನ್ನು ಬ್ಲೀಚಿಂಗ್ ಪೌಡರ್ ಅಥವಾ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು. ಮಕ್ಕಳಿಗೆ ನಿಂತ ನೀರಿನಲ್ಲಿ ಆಟವಾಡಲು ಬಿಡಬಾರದು. ಜ್ವರ, ವಾಂತಿ, ಭೇದಿಯಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ನಿರ್ಲಕ್ಷಿಸದೆ, ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು’ ಎಂದು ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.