ADVERTISEMENT

ಸಚಿವರಿಂದ ಅದ್ದೂರಿ ಪೂಜೆ, ಭೋಜನ!

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:32 IST
Last Updated 28 ಆಗಸ್ಟ್ 2019, 19:32 IST
ಶಶಿಕಲಾ ಜೊಲ್ಲೆ ಮತ್ತು ಇತರರಿಂದ ಬಸವಣ್ಣರ ಭಾವಚಿತ್ರಕ್ಕೆ ಪೂಜೆ
ಶಶಿಕಲಾ ಜೊಲ್ಲೆ ಮತ್ತು ಇತರರಿಂದ ಬಸವಣ್ಣರ ಭಾವಚಿತ್ರಕ್ಕೆ ಪೂಜೆ   

ಬೆಂಗಳೂರು: ವಿಕಾಸಸೌಧದಲ್ಲಿ ಇಬ್ಬರು ಸಚಿವರ ಕೊಠಡಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ವೈಭವದ ಪೂಜೆ, ಹಬ್ಬದ ಸಂಭ್ರಮ ಶಕ್ತಿಸೌಧದ ಕಣ್ಣು ಕುಕ್ಕುವಂತಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ಕೊಠಡಿಯನ್ನು ಹೂವುಗಳಿಂದ ಭವ್ಯವಾಗಿ ಅಲಂಕರಿಸಲಾಗಿತ್ತು. ನೆಲದ ಮೇಲೆ ರೆಡ್‌ ಕಾರ್ಪೆಟ್‌ ಮೇಲೂ ಹೂವುಗಳನ್ನು ಹಾಕಲಾಗಿತ್ತು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೊಠಡಿಯಲ್ಲೂ ಹೆಚ್ಚು ಕಮ್ಮಿ ಇದೇ ರೀತಿಯ ಅದ್ದೂರಿ ನೆಲೆಸಿತ್ತು.

ಈ ಇಬ್ಬರ ಕೊಠಡಿಗಳಲ್ಲೂ ದೇವರ ಪೂಜೆ ಭರ್ಜರಿಯಾಗಿ ನಡೆಯಿತು. ಸವದಿ ಕೊಠಡಿಯಲ್ಲಿ ಊರಿಂದ ಬಂದ ಅಭಿಮಾನಿಗಳಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು . ಇಬ್ಬರೂ ಬೆಳಗಾವಿ ಜಿಲ್ಲೆಯವರಾದ್ದರಿಂದ ಮುಜುಗರದ ಪ್ರಶ್ನೆ ಎದುರಿಸಬೇಕಾಯಿತು. ‘ನೂತನ ಸಚಿವರು ತಮ್ಮ ಕೊಠಡಿಗಳ ಪ್ರವೇಶಕ್ಕೆ ಇಷ್ಟು ಅದ್ಧೂರಿ ಪೂಜೆ ಬೇಕಿತ್ತೇ? ಬೆಳಗಾವಿಯಲ್ಲಿ ಭೀಕರ ಪ್ರವಾಹದಿಂದ ತತ್ತರಿಸಿರುವಾಗ ಇಂತಹ ನಡೆ ಸರಿಯೇ’ ಎಂಬ ಪ್ರಶ್ನೆಗಳು ಎದುರಾದವು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದಲಕ್ಷ್ಮಣ ಸವದಿ, ‘ನಾನು ಪ್ರವಾಹ ಪೀಡಿತ ಪ್ರದೇಶದಿಂದಲೇ ಬಂದಿದ್ದು, ಬೇರೆಯವರ ಉಪದೇಶ ಪಡೆಯುವ ಅಗತ್ಯವಿಲ್ಲ. ಅದ್ಧೂರಿ ಪೂಜೆ ಮಾಡಿಲ್ಲ. ಸರಳ ಪೂಜೆ ಮಾಡಿಸಿದ್ದೇನೆ. ಅಥಣಿಯಿಂದ 150 ಜನ ಬಂದಿದ್ದರು. ಅವರಿಗೆ ಊಟದ ವ್ಯವಸ್ಥೆ ಮಾಡಿಸಿದ್ದು ತಪ್ಪೇ’ ಎಂದು ಮರುಪ್ರಶ್ನೆ ಹಾಕಿದರು.

‘ನೆರೆ ಬಂದಾಗ ಹಗಲು– ರಾತ್ರಿ ಎನ್ನದೇ ಕೆಲಸ ಮಾಡಿದ್ದೇನೆ. ನನ್ನ ಮನೆಯೂ ಪ್ರವಾಹದ ನೀರಿನಿಂದ ಆವೃತವಾಗಿತ್ತು. ಅದರ ಸಂಕಷ್ಟ ಏನು ಎಂಬುದು ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ಮತ್ತೊಂದೆಡೆ ವಿಧಾನಸೌಧದಲ್ಲಿ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅತ್ಯಂತ ಸರಳ ಪೂಜೆ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.