ADVERTISEMENT

‘ಆಹಾರ ಮೇಳ’: ಸ್ಥಳೀಯರಿಗೆ ಸಂಕಷ್ಟ

ಫ್ರೇಜರ್‌ ಟೌನ್‌ನಲ್ಲಿ ಕಸದ ರಾಶಿ, ವೃದ್ಧರಿಗೆ ಉಸಿರಾಟದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 7:41 IST
Last Updated 20 ಏಪ್ರಿಲ್ 2023, 7:41 IST
ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ ಗುರುವಾರ ಪವಿತ್ರ ರಂಜಾನ್‌ ತಿಂಗಳು ನಿಮಿತ್ತ ಮಸೀದಿ ರಸ್ತೆಯ ಬೀದಿಗಳಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಮಾಂಸ ಹಾಗೂ ಮೀನು ಖಾದ್ಯ ಸವಿಯಲು ಸೇರಿದ್ದ ಗ್ರಾಹಕರು (ಎಡ ಚಿತ್ರ) ಮೇಳದಲ್ಲಿ ವ್ಯಾಪಾರಿಗಳು ಮಾರಾಟಕ್ಕೆ ಇಟ್ಟಿದ್ದ ವಿವಿಧ ಬಗೆಯ ಖಾದ್ಯ ತಿಂಡಿಗಳ ರುಚಿಯನ್ನು ಜನರು ಸವಿದರು
ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ ಗುರುವಾರ ಪವಿತ್ರ ರಂಜಾನ್‌ ತಿಂಗಳು ನಿಮಿತ್ತ ಮಸೀದಿ ರಸ್ತೆಯ ಬೀದಿಗಳಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಮಾಂಸ ಹಾಗೂ ಮೀನು ಖಾದ್ಯ ಸವಿಯಲು ಸೇರಿದ್ದ ಗ್ರಾಹಕರು (ಎಡ ಚಿತ್ರ) ಮೇಳದಲ್ಲಿ ವ್ಯಾಪಾರಿಗಳು ಮಾರಾಟಕ್ಕೆ ಇಟ್ಟಿದ್ದ ವಿವಿಧ ಬಗೆಯ ಖಾದ್ಯ ತಿಂಡಿಗಳ ರುಚಿಯನ್ನು ಜನರು ಸವಿದರು   

ಬೆಂಗಳೂರು: ರಂಜಾನ್‌ ಮಾಸದ ಅಂಗವಾಗಿ ಫ್ರೇಜರ್‌ ಟೌನ್‌ನಲ್ಲಿ ನಡೆಯುತ್ತಿರುವ ‘ಆಹಾರ ಮೇಳ’ವು ಸ್ಥಳೀಯ ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ.

ಗ್ರಾಹಕರು ಮಾಂಸದ ಖಾದ್ಯವನ್ನು ಸೇವಿಸಿ ಪ್ಲೇಟ್‌ಗಳೂ ಸೇರಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ರಸ್ತೆಗಳಲ್ಲಿ ಕಸದ ರಾಶಿಯೇ ಬಿದ್ದಿದೆ. ಈ ಆಹಾರ ಮೇಳದ ವಿರುದ್ಧ ಫ್ರೇಜರ್‌ ಟೌನ್‌ ಕ್ಷೇಮಾಭಿವೃದ್ಧಿ ಒಕ್ಕೂಟದ ನೇತೃತ್ವದಲ್ಲಿ 650 ನಿವಾಸಿಗಳು ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ.

‘ಇಲ್ಲಿ ಆಹಾರ ಮೇಳ ನಡೆಸುವುದು ಬೇಡ’ ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

‘ಕಳೆದ 27 ದಿನಗಳಿಂದ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ನಗರದ ಬೇರೆ ಬೇರೆ ಪ್ರದೇಶದಿಂದ ಗ್ರಾಹಕರು, ಮೀನು, ಚಿಕ್ಕನ್‌ ಖಾದ್ಯ ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ’ ಎಂದು ನೋವು ತೋಡಿಕೊಂಡಿದ್ದಾರೆ.

‘ಪ್ರತಿವರ್ಷವೂ ಆಹಾರ ಮೇಳ ನಡೆಯುತ್ತಿದ್ದರೂ ಈ ವರ್ಷ ಸಮಸ್ಯೆ ತೀವ್ರವಾಗಿದೆ’ ಎನ್ನುತ್ತಾರೆ
ನಿವಾಸಿಗಳು.

‘ಆಹಾರ ಮೇಳ ನಡೆಸಲು ಯಾರು ಅನುಮತಿ ನೀಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇಡೀ ಬಡಾವಣೆಯೇ ತ್ಯಾಜ್ಯದಿಂದ ಕೂಡಿದೆ. ಬೆಳಿಗ್ಗೆಯೂ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲ. ರಂಜಾನ್‌ ಮಾಸವಾದರೂ ಸ್ಥಳೀಯರಿಗೆ ನೆಮ್ಮದಿ, ಸಂತೋಷ ಇಲ್ಲವಾಗಿದೆ’ ಎಂದು ಒಕ್ಕೂಟದ ಸೌದ್ ದಸ್ತಗೀರ್‌ ಹೇಳಿದರು.

‘ಅನಧಿಕೃತವಾಗಿ 230 ಮಳಿಗೆ ನಿರ್ಮಿಸಲಾಗಿದೆ. ಪ್ರತಿನಿತ್ಯ ಮಾಂಸದ ಖಾದ್ಯ ತಯಾರಿಕೆಗೆ 3 ಟನ್‌ನಷ್ಟು ಸೌದೆ ಉರಿಸಲಾಗುತ್ತಿದೆ. ಮಕ್ಕಳು ಹಾಗೂ ವೃದ್ಧರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಮಸೀದಿ ರಸ್ತೆಯ ಅರ್ಧ ಜಾಗವನ್ನು ಆಹಾರ ಮೇಳಕ್ಕೆ ಮಳಿಗೆಗಳು ಅತಿಕ್ರಮಣ ಮಾಡಿಕೊಂಡಿವೆ. ಸರ್ಕಾರಕ್ಕೂ ಆದಾಯ ಬರುತ್ತಿಲ್ಲ. ಈ ಬಡಾವಣೆಯಲ್ಲಿ ಅನಾರೋಗ್ಯಕರ ವಾತಾವರಣವಿದೆ. ಬೆಸ್ಕಾಂ ಅನುಮತಿ ಪಡೆಯದೇ ಕಳ್ಳ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಳ್ಳಲಾಗಿದೆ’ ಎಂದು ಸ್ಥಳೀಯರು ದೂರಿದರು.

‘ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಪೊಲೀಸ್‌ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಬಿಬಿಎಂಪಿ ನೋಡಲ್‌ ಅಧಿಕಾರಿ ತಿಪ್ಪೇಸ್ವಾಮಿ ಅವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ. ಸಮಸ್ಯೆ ಹೇಳಿಕೊಳ್ಳಲು ಪಾಲಿಕೆ ಸದಸ್ಯರೂ ಇಲ್ಲ’ ಎಂದು ಸೌದ್‌ ದಸ್ತಗೀರ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.