ಸಾಂದರ್ಭಿಕ ಚಿತ್ರ
ಬೆಂಗಳೂರು: ಆಹಾರ ಸಂಸ್ಕರಣೆ ಉದ್ಯಮ ಕ್ಷೇತ್ರದಲ್ಲಿ ಸ್ಥಳೀಯವಾಗಿ ಆರಂಭವಾದ ಕಿರು ಉದ್ಯಮಗಳು ಈಗ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿವೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಬ್ರ್ಯಾಂಡಿಂಗ್ ಮಾಡುವ ಮೂಲಕ ದೇಶ–ವಿದೇಶಗಳಿಗೆ ರಫ್ತು ಮಾಡಿ ಉದ್ಯಮಿಗಳಾಗಿ ಬೆಳೆದವರ ಯಶೋಗಾಥೆಗಳಿವು...
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಶಿಲ್ಪಾ ಎಸ್. ಮಂಟಗಾಣಿ ಅವರು ‘ಆತ್ಮನಿರ್ಭರ ಭಾರತ’ ಅಭಿಯಾನದಡಿ ಪ್ರಾರಂಭವಾಗಿರುವ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆ (ಪಿಎಂಎಫ್ಎಂಇ) ಅಡಿಯಲ್ಲಿ ₹ 30 ಲಕ್ಷ ಸಹಾಯಧನ ಪಡೆದುಕೊಂಡು, ‘ಜವಾರಿ’ ಬ್ರ್ಯಾಂಡ್ ಹೆಸರಿನಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮವನ್ನು ಪ್ರಾರಂಭಿಸಿದ್ದರು. ಅದು ಈಗ ಯಶಸ್ಸಿನ ಹಾದಿಯಲ್ಲಿದೆ.
‘ನಾವು ಉತ್ತರ ಕರ್ನಾಟಕದ ಸ್ಥಳೀಯ ಆಹಾರ ಉತ್ಪನ್ನಗಳಾದ ಜೋಳ ಹಾಗೂ ಸಜ್ಜೆ ರೊಟ್ಟಿ, ವಿವಿಧ ಬಗೆಯ ಚಟ್ನಿ ಪುಡಿಗಳು, ರೆಡಿ ಟು ಈಟ್, ರೆಡಿ ಟು ಕುಕ್ ಉತ್ಪನ್ನಗಳನ್ನು ತಯಾರಿಸಿ ಆಸ್ಟ್ರಿಯಾ, ಸಿಂಗಪುರ, ಬ್ರಿಟನ್, ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ವಾರ್ಷಿಕ ₹ 1.5 ಕೋಟಿ ವಹಿವಾಟು ಆಗುತ್ತಿದೆ. ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಉತ್ತಮ ಆದಾಯವೂ ಸಿಗುತ್ತಿದೆ’ ಎಂದು ಶಿಲ್ಪಾ ತಿಳಿಸಿದರು.
‘ಅಭಯ ನ್ಯಾಚುರಲ್ಸ್ ಹೆಸರಿನಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದ್ದೇನೆ. ಬಾಳೆ ಹಣ್ಣಿನ ಪುಡಿ, ರಾಗಿ ಉತ್ಪನ್ನಗಳು, ವ್ಯಾಕ್ಯೂಮ್ ಫ್ರೈಡ್ ಚಿಪ್ಸ್‌ಗಳನ್ನು ಬಾಕಾಹು ಬ್ರ್ಯಾಂಡ್‌ನ ಹೆಸರಿನಲ್ಲಿ ಅಮೆರಿಕ, ಬ್ರಿಟನ್, ಯುಎಇ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ವಾರ್ಷಿಕ ₹85 ಲಕ್ಷ ವಹಿವಾಟು ನಡೆಯುತ್ತಿದೆ’ ಎಂದು ಮೈಸೂರು ಜಿಲ್ಲೆಯ ಹುಣಸೂರಿನ ನವೀನ್ ಅನುಭವ ಹಂಚಿಕೊಂಡರು.
ಪಿಎಂಎಫ್ಎಂಇ ಯೋಜನೆಯಡಿ ಗರಿಷ್ಠ ₹15 ಲಕ್ಷ ಸಹಾಯ ಧನ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ₹6 ಲಕ್ಷ ನೀಡಿದರೆ, ರಾಜ್ಯ ಸರ್ಕಾರ ₹9 ಲಕ್ಷ ನೀಡುತ್ತದೆ. ಐದು ವರ್ಷಗಳಲ್ಲಿ ರಾಜ್ಯದಾದ್ಯಂತ 5,962 ಜನ ಸಹಾಯ ಧನ ಪಡೆದುಕೊಂಡು ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ.
ಈ ಯೋಜನೆಯಡಿ ಸಿರಿಧಾನ್ಯಗಳ ಸಂಸ್ಕರಣೆ, ಬೆಲ್ಲ, ನಿಂಬೆ, ಬೇಕರಿ ಉತ್ಪನ್ನಗಳು, ಗಾಣದ ಮೂಲಕ ಎಣ್ಣೆ ಉತ್ಪಾದನೆ, ಮೆಣಸಿನ ಪುಡಿ, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಸಂಸ್ಕರಣೆಯ ಕಿರು ಉದ್ಯಮ, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು, ಕುಕ್ಕುಟ, ಸಮುದ್ರದ ಉತ್ಪನ್ನಗಳು, ವಿವಿಧ ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸಂಬಂಧಿಸಿದ ಕಿರು ಉದ್ಯಮಗಳನ್ನು ಪ್ರಾರಂಭಿಸಬಹುದು.
‘ರಾಜ್ಯದ ಬೆಳಗಾವಿಯಲ್ಲಿ 718, ಬೆಂಗಳೂರು ನಗರದಲ್ಲಿ 355 ಮಂದಿ, ಹಾವೇರಿಯಲ್ಲಿ 356, ಧಾರವಾಡದಲ್ಲಿ 314, ಶಿವಮೊಗ್ಗದಲ್ಲಿ 289, ವಿಜಯಪುರದಲ್ಲಿ 262, ಉಡುಪಿ267, ಬಾಗಲಕೋಟೆಯಲ್ಲಿ 258 ಮಂದಿ ಪಿಎಂಎಫ್‌ಎಂಇ ಯೋಜನೆಯಲ್ಲಿ ಧನ ಸಹಾಯ ಪಡೆದುಕೊಂಡಿದ್ದಾರೆ’ ಎಂದು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ. ಶಿವಕುಮಾರ್ ತಿಳಿಸಿದರು.
‘₹650 ಕೋಟಿ ಹೂಡಿಕೆ’ ‘ಪಿಎಂಎಫ್‌ಎಂಇ ಯೋಜನೆಯಡಿ ರಾಜ್ಯದಲ್ಲಿ ಆರು ಸಾವಿರ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೆರವು ಒದಗಿಸಲಾಗಿದೆ. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ₹650 ಕೋಟಿ ಹೂಡಿಕೆ ಆಗಿದೆ. ಇದರಿಂದಾಗಿ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಕ್ಕಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಗೆ ನೆರವಾಗಿದೆ. ಮಹಿಳಾ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ’ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ. ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.