ADVERTISEMENT

ವಿದೇಶಿಯರ ವಿವರ ಕಲೆ ಹಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:20 IST
Last Updated 14 ಜೂನ್ 2025, 16:20 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ವಿದೇಶಿಯರನ್ನು ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಅಂತಹವರ ಬಗ್ಗೆ, ವಿದೇಶಿಯರ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಸೂಕ್ತ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಸುತ್ತೋಲೆಯೊಂದನ್ನು ಹೊರಡಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ವೀಸಾ ವಿಸ್ತರಣೆ ಕೋರಿ ಸಿರಿಯಾದ ಪ್ರಜೆ ಮೌಝಲ್ ಖ್ವಾಮ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಈ‌ ಸಂಬಂಧ ಎರಡು ವಾರಗಳಲ್ಲಿ ಸುತ್ತೋಲೆ ಹೊರಡಿಸಿ, ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಾಕೀತು ಮಾಡಿದೆ.

‘ಇತ್ತೀಚಿನ ದಿನಗಳಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸದ ಹೆಸರಿನಲ್ಲಿ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುವುದು ಮತ್ತು ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗದ ಹೆಸರಿನಲ್ಲಿ ದೊಡ್ಡ ಸಂಖ್ಯೆಯ ವಿದೇಶಿಯರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇವರಲ್ಲಿ ಅನೇಕರು ತಮ್ಮ ವೀಸಾ ಅವಧಿ ಮೀರಿದ್ದರೂ ತಂತಮ್ಮ ದೇಶಗಳಿಗೆ ಮರಳುತ್ತಿಲ್ಲ’ ಎಂಬ ಕೇಂದ್ರ ಸರ್ಕಾರದ ಆತಂಕವನ್ನು ನ್ಯಾಯಪೀಠ ಪರಿಗಣಿಸಿ ಈ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ‘ರಾಜ್ಯದಲ್ಲಿ ವೀಸಾ ಅವಧಿ ಮುಗಿದರೂ ಅನಧಿಕೃತವಾಗಿ ನೆಲೆಯೂರಿರುವ ವಿದೇಶಿಯರು ಅನಗತ್ಯ ಮತ್ತು ಅನಪೇಕ್ಷಿತ ನೆಪಗಳನ್ನೊಡ್ಡಿ ವೀಸಾ ಅವಧಿ ವಿಸ್ತರಣೆ ಕೋರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅರ್ಜಿದಾರರ ವೀಸಾ ಅವಧಿ 2015ರಲ್ಲೇ ಮುಗಿದಿರುವುದು ಇದಕ್ಕೆ ಜ್ವಲಂತ ನಿದರ್ಶನ. ಇಂತಹ ಪ್ರಕರಣಗಳಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ಸರ್ಕಾರ ಮತ್ತು ಖಾಸಗಿ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಡಯಾಗ್ನಾಸ್ಟಿಕ್‌ ಕೇಂದ್ರಗಳು, ಸೌಖ್ಯ ಕೇಂದ್ರಗಳೂ ಸೇರಿದಂತೆ ಎಲ್ಲಾ ವೈದ್ಯಕೀಯ ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು, ವಾಣಿಜ್ಯ ಕಂಪನಿಗಳು, ಎಲ್ಲಾ ಸಂಸ್ಥೆಗಳು ತಮ್ಮಲ್ಲಿರುವ ವಿದೇಶಿಯರು ಯಾವ ಉದ್ದೇಶಕ್ಕಾಗಿ ಇದ್ದಾರೆ? ಅವರ ಕೆಲಸವೇನು? ಅಧ್ಯಯನ, ಸಂಶೋಧನೆ ಅಥವಾ ಚಿಕಿತ್ಸೆ ಪಡೆಯುತ್ತಿದ್ದರೆ ಅಂತಹ ಸಂಸ್ಥೆಗಳು ವಿದೇಶಿಯರ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಸೂಕ್ತ ಮಾಹಿತಿ ಒದಗಿಸಬೇಕು. ಇದಕ್ಕಾಗಿ ಸ್ಥಳೀಯ ಪೊಲೀಸರು ನಿರ್ದಿಷ್ಟ ನಮೂನೆಯೊಂದನ್ನು ಸಿದ್ಧಪಡಿಸಬೇಕು’ ಎಂದು ಆದೇಶಿಸಿದೆ.

‘ಎಲ್ಲಾ ಸಂಸ್ಥೆಗಳು ಕಾಲಕಾಲಕ್ಕೆ ವಿದೇಶಿಯರ ವಿವರಗಳನ್ನು ಒದಗಿಸಬೇಕು. ಒಂದು ವೇಳೆ ಒದಗಿಸದೇ ಇದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಸಿವಿಲ್‌ ಹಾಗೂ ಕ್ರಿಮಿನಲ್‌ ಕ್ರಮ ಜರುಗಿಸತಕ್ಕದ್ದು’ ಎಂದು ನ್ಯಾಯಪೀಠ ತಾಕೀತು ಮಾಡಿದೆ. ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.