ADVERTISEMENT

ಅರಣ್ಯ ಇಲಾಖೆಯಲ್ಲಿ ಕನ್ನಡ ಕಡೆಗಣನೆ: ಆಕ್ಷೇಪ

ಅಧಿಕಾರಿಗಳ ನಡೆಗೆ ಟಿ.ಎಸ್. ನಾಗಾಭರಣ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 16:38 IST
Last Updated 4 ಫೆಬ್ರುವರಿ 2022, 16:38 IST

ಬೆಂಗಳೂರು:ಅರಣ್ಯ ಇಲಾಖೆಯ ವೆಬ್‌ ಪೋರ್ಟಲ್, ಸಾಮಾಜಿಕ ಜಾಲತಾಣ ಮತ್ತು ಕಡತಗಳಲ್ಲಿ ಇಂಗ್ಲಿಷ್ ಭಾಷೆ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ‘ಜನರಿಗೆ ಅರ್ಥವಾಗದ ಭಾಷೆಯಲ್ಲಿ ಮಾಹಿತಿಗಳನ್ನು ನೀಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ ಮುಖ್ಯಸ್ಥ) ಕಾರ್ಯಾಲಯದಲ್ಲಿ ಶುಕ್ರವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ಕನ್ನಡ ಭಾಷೆಯು ರಾಜ್ಯದ ಆಡಳಿತ ಭಾಷೆಯಾಗಿ ಹಲವು ದಶಕಗಳೇ ಕಳೆದಿವೆ. ಇನ್ನೂ ಆಂಗ್ಲ ಭಾಷೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವ್ಯವಹಾರ ನಡೆಸುತ್ತಿರುವುದು ಆಡಳಿತದಲ್ಲಿ ಕನ್ನಡ ಅನುಷ್ಠಾನದ ಲೋಪವೆಸಗಿದಂತೆ.ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಹಿ ಮತ್ತು ಮೊಹರು ಇರುವ ನಡವಳಿಗಳೂ ಆಂಗ್ಲಭಾಷೆಯಲ್ಲಿವೆ. ಇದರಿಂದಾಗಿ ರಾಜ್ಯದ ರೈತರು ಹಾಗೂ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಮಾಹಿತಿ ತಲುಪುವುದಿಲ್ಲ’ ಎಂದು ತಿಳಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ ಮುಖ್ಯಸ್ಥ) ಸಂಜಯ್ ಮೋಹನ್, ‘ಆಡಳಿತದ ಎಲ್ಲ ಹಂತಗಳಲ್ಲಿಯೂ ಒಂದು ತಿಂಗಳ ಒಳಗೆ ಸಮರ್ಪಕವಾಗಿ ಕನ್ನಡವನ್ನು ಅನುಷ್ಠಾನ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿಕನ್ನಡಪರ ಚಿಂತಕ ರಾ.ನಂ.ಚಂದ್ರಶೇಖರ,ಮುಖ್ಯಮಂತ್ರಿ ಸಲಹೆಗಾರ (ಇ-ಆಡಳಿತ) ಬೇಳೂರು ಸುದರ್ಶನ,ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ, ಅರಣ್ಯ ಇಲಾಖೆ ಅಧಿಕಾರಿಗಳಾದ ರಂಗರಾವ್, ಅನಿಲ್ ಕುಮಾರ್ ರತನ್, ಆರ್.ಕೆ.ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.