ADVERTISEMENT

2.50 ಲಕ್ಷ ಎಕರೆ ಅರಣ್ಯ ಜಮೀನು ಒತ್ತುವರಿ

ಪ್ರೊ. ಮಾಧವ ಗಾಡ್ಗೀಳ್ ಆತ್ಮಕಥೆ ‘ಏರು ಘಟ್ಟದ ನಡಿಗೆ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 15:44 IST
Last Updated 13 ಫೆಬ್ರುವರಿ 2025, 15:44 IST
ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ ‘ಏರುಘಟ್ಟದ ನಡಿಗೆ’ ಪುಸ್ತಕ ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ ಅವರು, ಅನುವಾದಕ ನಾಗೇಶ ಹೆಗಡೆ ಅವರಿಗೆ ‍ಪುಸ್ತಕ ನೀಡಿದರು. ನರೇಂದ್ರ ರೈ ದೇರ್ಲ, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಕೆ.ಇ. ರಾಧಾಕೃಷ್ಣ ಉಪಸ್ಥಿತರಿದ್ದರು.  ಪ್ರಜಾವಾಣಿ ಚಿತ್ರ 
ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ ‘ಏರುಘಟ್ಟದ ನಡಿಗೆ’ ಪುಸ್ತಕ ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ ಅವರು, ಅನುವಾದಕ ನಾಗೇಶ ಹೆಗಡೆ ಅವರಿಗೆ ‍ಪುಸ್ತಕ ನೀಡಿದರು. ನರೇಂದ್ರ ರೈ ದೇರ್ಲ, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಕೆ.ಇ. ರಾಧಾಕೃಷ್ಣ ಉಪಸ್ಥಿತರಿದ್ದರು.  ಪ್ರಜಾವಾಣಿ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ 2.50 ಲಕ್ಷ ಎಕರೆ ಅರಣ್ಯ ಜಮೀನು ಒತ್ತುವರಿಯಾಗಿದ್ದು, ಈವರೆಗೂ 5,000 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಾಗೇಶ ಹೆಗಡೆ ಮತ್ತು ಶಾರದಾ ಗೋಪಾಲ ಅನುವಾದಿಸಿರುವ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ ‘ಎ ವಾಕ್‌ ಅಪ್‌ ದ ಹಿಲ್’ನ ಕನ್ನಡ ಕೃತಿ ‘ಏರುಘಟ್ಟದ ನಡಿಗೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಒತ್ತುವರಿ ತೆರವಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಬೆಂಗಳೂರು ನಗರದಲ್ಲಿ ಸಾವಿರಾರು ಕೋಟಿ ಮೌಲ್ಯದ 117 ಎಕರೆ ತೆರವು ಮಾಡಲಾಗಿದೆ. ತೆರವು ಮಾಡಿಸಲಾದ ಅರಣ್ಯ ಜಮೀನಿನ ಗಡಿ ಗುರುತಿಗೆ ಕಂದಕ ತೋಡಿ, ಗಿಡ ನೆಡಲಾಗಿದೆ. ಮತ್ತೆ ಒತ್ತುವರಿ ಆಗದಂತೆ ಎಚ್ಚರ ವಹಿಸಲೂ ಸೂಚಿಸಲಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಶೇಕಡ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಶೇ 21.7ರಷ್ಟು ಮಾತ್ರ ಇದೆ. ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಡುವ ಗುರಿ ನೀಡಿದ್ದು, ಗುರಿ ಮೀರಿದ ಸಾಧನೆ ಮಾಡಲಾಗಿತ್ತು. ಇವುಗಳ ಪೈಕಿ ಎಷ್ಟು ಬದುಕಿ ಉಳಿದಿವೆ ಎಂದು ತಿಳಿಯಲು ಲೆಕ್ಕ ಪರಿಶೋಧನೆ ಮಾಡಿಸಲಾಗಿದ್ದು, ಈ ವಿವರವನ್ನು ಅರಣ್ಯ ಇಲಾಖೆಯ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ಕೆ. ಕಸ್ತೂರಿ ರಂಗನ್ ಸಮಿತಿಯ ವರದಿಯಲ್ಲಿ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ 20,668 ಚ.ಕಿ.ಮೀ. ಪರಿಸರ ಸೂಕ್ಷ್ಮ ಎಂದು ಗುರುತಿಸಿದ್ದು, ಈಗಾಗಲೇ 16,114 ಚದರ ಕಿ.ಮೀ. ಸಂರಕ್ಷಿಸಲಾಗಿದೆ. ವರದಿಯಲ್ಲಿ ನಮೂದಿಸಿರುವ ವ್ಯಾಪ್ತಿಯ ಶೇ 83ರಷ್ಟು ಪ್ರದೇಶದ ಸಂರಕ್ಷಣೆಯಾಗಿದೆ. ಉಳಿದ 4 ಸಾವಿರ ಚ.ಕಿ.ಮೀ ಅಂದರೆ ಶೇ 17ರಷ್ಟು ಪ್ರದೇಶದಲ್ಲಿ 39 ತಾಲ್ಲೂಕುಗಳ ಸುಮಾರು 1,449 ಗ್ರಾಮಗಳಿದ್ದು, ಇಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ, ವಸತಿ ಪ್ರದೇಶಗಳಿವೆ. ಹೀಗಾಗಿ ಜೀವನ, ಜೀವನೋಪಾಯ ಮತ್ತು ಪರಿಸರ ಸಂರಕ್ಷಣೆ ಎಲ್ಲವನ್ನೂ ಸಮತೋಲಿತವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು.

ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್, ಪರಿಸರ ಚಿಂತಕ ನರೇಂದ್ರ ರೈ ದೇರ್ಲ, ಆರ್.ಪಿ.ಇ. ಸೊಸೈಟಿ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ ಪಾಲ್ಗೊಂಡಿದ್ದರು.

ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ. ಮನುಷ್ಯನ ದುರಾಸೆಯಿಂದ ನೆಲದೊಳಗೆ ಬರಗಾಲ ಸೃಷ್ಟಿ ಮಾಡಲಾಗಿದೆ
  ನಾಗೇಶ ಹೆಗಡೆ  ಲೇಖಕ
ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಭೂಮಿ ಬಂಜರಾಗುತ್ತಿದೆ. ಬಂಜರು ಭೂಮಿಯಿಂದಾಗಿ ಏಡಿಗಳು ಸಿಗುತ್ತಿಲ್ಲ 
ಕ್ಯಾಪ್ಟನ್ ಜಿ.ಆರ್.ಗೋ‍ಪಿನಾಥ್  ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.