ADVERTISEMENT

ಐದನೇ ದಿನಕ್ಕೆ ಧರಣಿ; ಒಗ್ಗಟ್ಟಿನ ಹೋರಾಟಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 16:32 IST
Last Updated 20 ಡಿಸೆಂಬರ್ 2020, 16:32 IST
ಧರಣಿಯಲ್ಲಿ ಪಾಲ್ಗೊಂಡಿದ್ದ ಹಲವು ಸಂಘಟನೆಗಳ ಪದಾಧಿಕಾರಿಗಳು
ಧರಣಿಯಲ್ಲಿ ಪಾಲ್ಗೊಂಡಿದ್ದ ಹಲವು ಸಂಘಟನೆಗಳ ಪದಾಧಿಕಾರಿಗಳು   

ಬೆಂಗಳೂರು: ಕೇಂದ್ರ ಸರ್ಕಾರದ ರೈತ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರ ಐದನೇ ದಿನ ಪೂರೈಸಿತು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ರೈತ–ದಲಿತ–ಕಾರ್ಮಿಕರ ಐಕ್ಯ ಹೋರಾಟ ಹಾಗೂ ಎಡ ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ.

ಭಾನುವಾರ ಧರಣಿ ಸ್ಥಳದಲ್ಲಿ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ‘ಕೇಂದ್ರ ಸರ್ಕಾರದ ಕಾಯ್ದೆಗಳು, ರೈತ ವಿರೋಧಿಯಾಗಿವೆ. ಜೊತೆಗೆ, ಬಂಡವಾಳಶಾಹಿ ಪರವಾಗಿದೆ. ಕೇಂದ್ರದ ಈ ನೀತಿಯನ್ನು ವಿದ್ಯಾರ್ಥಿಗಳು, ಯುವಜನರು, ರೈತರು ಹಾಗೂ ಕಾರ್ಮಿಕರು ಒಗ್ಗಟ್ಟಾಗಿ ಹಿಮ್ಮೆಟ್ಟಿಸಬೇಕು’ ಎಂದರು.

ADVERTISEMENT

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ, ‘ಕೃಷಿ ಮಸೂದೆಗಳು ರೈತರ ಪಾಲಿಗೆ ಮರಣ ಶಾಸನಗಳಾಗಿವೆ. ದೆಹಲಿಯಲ್ಲಿ 24 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ರೈತರ ಜೊತೆ ಮಾತನಾಡದೆ ಕಾಲಹರಣ ಮಾಡುತ್ತಿದೆ. ಅನ್ನದಾತರನ್ನು ಬೀದಿಗೆ ತಳ್ಳಿರುವ ಸರ್ಕಾರಕ್ಕೆ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವನ್ನಪ್ಪಿರುವ ರೈತರಿಗೆ ಧರಣಿ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.