ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಭಾನುವಾರ ನಡೆಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 187 ವಿದ್ಯಾರ್ಥಿಗಳಿಗೆ ಶಿಷ್ಯವೇತನ, 14 ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಭಾ ವೇತನ ಪುರಸ್ಕಾರ, 20 ವಿದ್ಯಾರ್ಥಿಗಳಿಗೆ ನಾಯಕತ್ವ ಪ್ರತಿಭಾ ಪುರಸ್ಕಾರ ವೇತನ ಸೇರಿ ಒಟ್ಟು ₹ 6 ಕೋಟಿ ವಿತರಣೆ ಮಾಡಲಾಯಿತು.
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಮಾತನಾಡಿ, ‘ಸಂಸ್ಥಾಪನಾ ದಿನದ ಸ್ಮರಣಾರ್ಥ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು ಅದರಲ್ಲೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ವೇತನ ಹಾಗೂ ಶಿಷ್ಯವೇತನ ನೀಡುವ ಮೂಲಕ ವಿದ್ಯಾರ್ಥಿಗಳು ಉನ್ನತ ಮಟ್ಟದ ನಾಯಕರಾಗಿ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ. ಕ್ರೀಡಾ ಕ್ಷೇತ್ರವನ್ನು ಪ್ರೋತ್ಸಾಹಿಸುವುದಕ್ಕಾಗಿ ಬಾಗಲೂರಿನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ಎಫ್‌ಐಬಿಎ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಅರವಿಂದ ಲಿಂಬಾವಳಿ, ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್‌ನ ಸುಧೀರ್ ಮೆನನ್ ಚೆಂಬಜಿ, ಯುಎಸ್ಎ ಬೆಲ್ಟ್ಸ್ ವಿಲ್ಲೆ ಇಂಡಸ್ಟ್ರಿಯಲ್ ಸಮೂಹದ ಬೆನ್ ಚಿಕ್ಕಸ್ವಾಮಿ ಅವರು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಿಕ್ಕಮುನಿಯಪ್ಪ ರೆಡ್ಡಿ ಅವರ ದೂರದೃಷ್ಟಿಯನ್ನು ಸ್ಮರಿಸಿದರು.
ಸಿಎಂಆರ್ ವಿಶ್ವವಿದ್ಯಾಲಯ ಕುಲಾಧಿಪತಿ ಸಬಿತಾ ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಧಾರ ಟ್ರಸ್ಟ್‌ನ ಟ್ರಸ್ಟಿ ಕೆ.ಸಿ. ರಾಜುರೆಡ್ಡಿ, ಕಾರ್ಯದರ್ಶಿ ಕೆ.ಸಿ. ಜಗನ್ನಾಥ ರೆಡ್ಡಿ, ಸಹ ಕುಲಾಧಿಪತಿ ಜಯದೀಪ್ ಕೆ.ಆರ್. ರೆಡ್ಡಿ, ಪ್ರೊವೋಸ್ಟ್ ತ್ರಿಸ್ತಾ ರಾಮಮೂರ್ತಿ, ಕುಲಪತಿ ಎಚ್.ಬಿ. ರಾಘವೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.