ADVERTISEMENT

ಕಾಲೇಜಿನಲ್ಲೇ ಸಂಸ್ಥಾಪಕ ಆತ್ಮಹತ್ಯೆ: ಡೆತ್‌ ನೋಟ್‌ ಪತ್ತೆ

ಮರಣ ಪತ್ರ ಪತ್ತೆ; ಪ್ರಾಂಶುಪಾಲ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 19:48 IST
Last Updated 1 ಅಕ್ಟೋಬರ್ 2021, 19:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆ ಯಲ್ಲಿರುವ ಕಲ್ಪವೃಕ್ಷ ಕಾಲೇಜಿನ ಕೊಠಡಿಯಲ್ಲಿ ಕೆ.ಎನ್. ಮಂಜುನಾಥ್ (33) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೃತ ಮಂಜುನಾಥ್, ಕಲ್ಪವೃಕ್ಷ ಕಾಲೇಜಿನ ಸಂಸ್ಥಾಪಕ. ಕಾಲೇಜಿನ 2ನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಫ್ಯಾನ್‌ಗೆ ಬಟ್ಟೆಯಿಂದ ನೇಣುಹಾಕಿಕೊಂಡು ಸೆ. 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಘಟನಾ ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದೆ. ‘ನನ್ನ ಸಾವಿಗೆ ಮಲ್ಲಿಕಾರ್ಜುನ್ ಹಾಗೂ ಚಂದ್ರು ಕಾರಣ’ ಎಂಬುದಾಗಿ ಬರೆಯಲಾಗಿದೆ. ಅದನ್ನು ಬರೆದಿದ್ದು ಮಂಜುನಾಥ್ ಅವರೇನಾ ಎಂಬುದನ್ನು ಕೈಬರಹ ಪರಿಶೀಲನೆಯಿಂದ ತಿಳಿದುಕೊಳ್ಳಬೇಕಿದೆ’ ಎಂದೂ ತಿಳಿಸಿವೆ.

ADVERTISEMENT

‘ಮಂಜುನಾಥ್ ಸಾವಿನ ಬಗ್ಗೆ ಪತ್ನಿ ಕವಿತಾ ದೂರು ನೀಡಿದ್ದಾರೆ. ಅದರನ್ವಯ ಅಪರಾಧ ಸಂಚು (ಐಪಿಸಿ 34), ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306), ಜೀವ ಬೆದರಿಕೆ (ಐಪಿಸಿ 506) ಆರೋಪ ದಡಿ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ್ ಹಾಗೂ ಉಪನ್ಯಾಸಕ ಚಂದ್ರು ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ನೋಟಿಸ್ ನೀಡಿ ಅವರಿಬ್ಬರ ವಿಚಾರಣೆ ನಡೆಸಬೇಕಿದೆ. ಪುರಾವೆ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಮೂಲಗಳು ವಿವರಿಸಿವೆ.

₹ 25 ಲಕ್ಷ ಕಳೆದುಕೊಂಡಿದ್ದರು: ‘ಮಂಜುನಾಥ್ ಅವರು 2019ರಲ್ಲಿ ಕಲ್ಪವೃಕ್ಷ ಕಾಲೇಜು ಆರಂಭಿಸಿದ್ದರು. ಕಾಲೇಜು ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಕರೆತಂದಿದ್ದ ಆರೋಪಿಗಳು, ಶುಲ್ಕದ ಹಣವನ್ನು ಕಾಲೇಜಿಗೆ ನೀಡಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನೆಲಮಂಗಲ ಬಳಿ ‘ಮಾಗಡಿ ಕೆಂಪೇಗೌಡ’ ಪ್ರಾಥಮಿಕ ಶಾಲೆ ಜಾಗವನ್ನು ಮಂಜುನಾಥ್ ಅವರಿಗೆ ಆರೋಪಿಗಳು ಮೂರು ತಿಂಗಳ ಹಿಂದಷ್ಟೇ ಕೊಡಿಸಿದ್ದರು. ಆದರೆ, ಜಾಗದ ಬಗ್ಗೆ ವ್ಯಾಜ್ಯವಿತ್ತು. ಇದರಿಂದಾಗಿ ಮಂಜುನಾಥ್, ₹ 25 ಲಕ್ಷ ಕಳೆದುಕೊಂಡಿದ್ದರು. ಜಾಗದಿಂದ ಕಳೆದುಕೊಂಡ ಹಣ ಹಾಗೂ ವಿದ್ಯಾರ್ಥಿಗಳ ಶುಲ್ಕದ ಹಣವನ್ನು ವಾಪಸು ನೀಡುವಂತೆ ಮಂಜುನಾಥ್ ಆರೋಪಿಗಳನ್ನು ಒತ್ತಾಯಿಸಿದ್ದರು. ಹಣ ನೀಡುವುದಿಲ್ಲವೆಂದು ಆರೋಪಿಗಳು, ಜೀವ ಬೆದರಿಕೆಯೊಡ್ಡಿದ್ದರು. ಕಿರುಕುಳ ಸಹ ನೀಡಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.