ADVERTISEMENT

ಅಮೆರಿಕ ಹೆಸರು ಬಳಸಿ ₹ 35.50 ಲಕ್ಷ ಟೋಪಿ!

ತವರು ದೇಶದಲ್ಲಿ ‌ವಂಚಕರ ಬಲೆಗೆ ಬಿದ್ದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 1:58 IST
Last Updated 22 ನವೆಂಬರ್ 2019, 1:58 IST

ಬೆಂಗಳೂರು: ಆನ್‍ಲೈನ್ ವಂಚಕರ ಬಲೆಗೆ ಬೀಳದೆ ದುಬೈನಿಂದ ಮರಳಿದ್ದ ಉದ್ಯಮಿಯ ಬೆನ್ನುಬಿದ್ದ ಚಾಲಾಕಿಗಳು, ಕೊನೆಗೂ ಅಮೆರಿಕ ರಾಯಭಾರಿ ಕಚೇರಿಯ ಹೆಸರು ಬಳಸಿ ₹ 35.50 ಲಕ್ಷ ಟೋಪಿ ಹಾಕಿದ್ದಾರೆ!

ರಾಮಗೊಂಡನಹಳ್ಳಿ ನಿವಾಸಿ ಉದ್ಯಮಿ ಶಿವಕುಮಾರ್ (50) ವಂಚನೆಗೆ ಒಳಗಾದವರು. ಈ ಕುರಿತು ವೈಟ್‍ಫೀಲ್ಡ್ ಠಾಣೆಗೆ ಅವರು ದೂರು ನೀಡಿದ್ದಾರೆ.

ಶಿವಕುಮಾರ್ ಅವರು ಫ್ರೀ ಲ್ಯಾನ್ಸ್ ಔಷಧ ಉದ್ಯಮ ನಡೆಸುತ್ತಿದ್ದು, ಆನ್‍ಲೈನ್‌ನಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತು ಗಮನಿಸಿ ಜಪಾನ್‍ನ ಮೊಸಿಡಾ ಫಾರ್ಮಸ್ಯೂಟಿಕಲ್‌ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂದು ಹೇಳಿಕೊಂಡು ಕಿಯೋಶಿ ಮಿಜ್‍ಗುಚಿ ಎಂಬಾತ ಶಿವಕುಮಾರ್‌ ಅವರನ್ನು ಪರಿಚಯಿಸಿಕೊಂಡಿದ್ದ.

ADVERTISEMENT

‘ಬೆಂಗಳೂರಿನಲ್ಲಿ ಹೊಸ ಕಂಪನಿ ಆರಂಭಿಸುತ್ತಿದ್ದೇನೆ. ಅದಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತೇನೆ’ ಎಂದು ಹೇಳಿ ಶಿವಕುಮಾರ್ ಅವರಿಗೆ ಕಿಯೋಶಿ ಅ.17ರಂದು ಇ-ಮೇಲ್ ಕಳುಹಿಸಿದ್ದಾನೆ. ‘ಕಂಪನಿ ನಡೆಸಲು ಟಮೋಟಿವ್ ಹೆಸರಿನ ಕಚ್ಚಾ ಖನಿಜ ಅಗತ್ಯವಿದೆ. ಅದು ಪಶ್ಚಿಮ ಬಂಗಾಳದ ಮಾರ್ಗೋ ಮಿನರಲ್ಸ್‌ನ ರುಚಿಕಾ ಸಿಂಗ್ ಎಂಬವರ ಬಳಿ ಇದೆ. ಅದನ್ನು ಖರೀದಿಸಿ ನೀಡಿದರೆ ₹ 210 ಕೋಟಿ ಮೊತ್ತದ ಖರೀದಿಯಲ್ಲಿ ಶೇ 7ರಷ್ಟು, ಅಂದರೆ ಸುಮಾರು ₹ 16.5 ಕೋಟಿ ಕಮಿಷನ್ ನೀಡುತ್ತೇನೆ’ ಎಂದೂ ತಿಳಿಸಿದ್ದ.

ಕಿಯೋಶಿಯ ಮಾತನ್ನು ನಂಬಿದ ಶಿವಕುಮಾರ್ ಬಳಿ ರುಚಿಕಾ ಎಂಬಾಕೆ ಕೂಡಾ ಮಾತನಾಡಿ, ‘ಕಚ್ಚಾ ಖನಿಜ ನೀಡಲು ಆರಂಭಿಕವಾಗಿ ಹಣ ನೀಡಬೇಕು’ ಎಂದು ಹೇಳಿ ₹ 8.67 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾಳೆ. ಬಳಿಕ ಕಿಯೋಶಿ ಕರೆ ಮಾಡಿ, ‘ಕಂಪನಿ ಆರಂಭಿಸಲು ಅಮೆರಿಕ ಹಣ ನೀಡಿದೆ. ಅದನ್ನು ನೀವು ದುಬೈಗೆ ತೆರಳಿ ಜೆಫ್ರಿ ಆ್ಯಂಡ್ರೋ ಎಂಬವರಿಂದ ಪಡೆದುಕೊಳ್ಳಿ’ ಎಂದಿದ್ದಾನೆ. ಅದರಂತೆ, ಅ. 27ರಂದು ದುಬೈಗೆ ತೆರಳಿದ ಶಿವಕುಮಾರ್, ಹೋಟೆಲ್‍ ಒಂದರಲ್ಲಿ ತಂಗಿದ್ದಾಗ
ಜೆಫ್ರಿ ಆ್ಯಂಡ್ರೋ ಪರವಾಗಿ ಬಂದಿರುವುದಾಗಿ ಹೇಳಿ, ರೆಕ್ಸ್ ಎಂಬಾತ ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಸೂಟ್‍ಕೇಸ್‍ ತೋರಿಸಿ, ‘ಇದರಲ್ಲಿ ಡಾಲರ್‍ಗಳಿವೆ. ಇದನ್ನು ಪಡೆದುಕೊಂಡು ಹೋಗಲು ₹ 35.50 ಲಕ್ಷ ಕೊಡಿ’ ಎಂದಿದ್ದಾನೆ. ಅನುಮಾನಗೊಂಡ ಶಿವಕುಮಾರ್ ಹಣ ನೀಡದೆ ವಾಪಸು ಬಂದಿದ್ದಾರೆ.

ನ.7ರಂದು ಅವರಿಗೆ ಅಮೆರಿಕ ವಿಳಾಸದಿಂದ ಇ -ಮೇಲ್ ಬಂದಿದ್ದು, ‘ನಿಮಗೆ ಅಮೆರಿಕದಿಂದ ಕಳುಹಿಸಿಕೊಡುವ ಕೋಟ್ಯಂತರ ಮೊತ್ತದ ಡಾಲರ್‌ನ್ನು ₹ 35.50 ಲಕ್ಷ ಪ್ರೋಸೆಸಿಂಗ್‌ ಶುಲ್ಕ ಪಾವತಿಸಿ ಪಡೆಯಿರಿ. ಇಲ್ಲದಿದ್ದರೆ ಡಾಲರ್‌ಗಳ ಸೂಟ್‍ಕೇಸ್ ವಾಪಸು ಕಳುಹಿಸುತ್ತೇವೆ’ ಎಂಬ ಸಂದೇಶ ಇತ್ತು. ‌ಅಮೆರಿಕ ರಾಯಭಾರಿ ಕಚೇರಿಯಿಂದಲೇ ಇ-ಮೇಲ್ ಬಂದಿರಬಹುದು ಎಂದು ನಂಬಿದ ಶಿವಕುಮಾರ್‌, ಆರೋಪಿಗಳು ಕಳುಹಿಸಿದ ಬ್ಯಾಂಕ್‌ ಖಾತೆಗಳಿಗೆ ₹ 35.50 ಲಕ್ಷ ಜಮೆ ಮಾಡಿದ್ದಾರೆ.

ಹಣ ಜಮೆ ಆದ ಬಳಿಕ ಆರೋಪಿಗಳು ನೀಡಿದ್ದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದಾಗ, ಸ್ವಿಚ್ ಆಫ್‌ ಬಂದಿದೆ. ಆಗ ಶಿವಕುಮಾರ್‌ ಅವರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ವಂಚಕರ ವಿರುದ್ಧ ಎಫ್‌ಐಆರ್‌

‘ಶಿವಕುಮಾರ್ ನೀಡಿರುವ ದೂರಿನ ಆಧಾರದಲ್ಲಿ ಕಿಯೋಶಿ ಮಿಜ್‍ಗುಚಿ, ರುಚಿಕಾ ಸಿಂಗ್, ಜೆಫ್ರಿ ಆ್ಯಂಡ್ರೋ, ಜಾವಿಸ್ ಕ್ಯಮಿ, ಮಾರ್ಗೋ ಮಿನರಲ್ಸ್, ಮೊಚಿಡಾ ಕಂಪನಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆನ್‍ಲೈನ್ ವಂಚಕರು ಭಾರತದ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ, ಆ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸಲಾಗುತ್ತಿದೆ. ತನಿಖೆ ಮುಂದುರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.