ADVERTISEMENT

ಸಾಮಗ್ರಿ ಮಾರಾಟ ಹೆಸರಿನಲ್ಲಿ ವಂಚನೆ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 11:02 IST
Last Updated 12 ಅಕ್ಟೋಬರ್ 2020, 11:02 IST
ಆರೋಪಿ ದಾವೂದ್ ಪಾಷಾ ಅಲಿಯಾಸ್ ನಿಜಮ್ ಪಾಷಾ
ಆರೋಪಿ ದಾವೂದ್ ಪಾಷಾ ಅಲಿಯಾಸ್ ನಿಜಮ್ ಪಾಷಾ   

ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿ ಆನ್‌ಲೈನ್‌ ಮೂಲಕ ಜನರನ್ನು ಸಂಪರ್ಕಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ದಾವೂದ್ ಪಾಷಾ ಅಲಿಯಾಸ್ ನಿಜಮ್ ಪಾಷಾ (46) ಎಂಬಾತನನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಆರ್.ಟಿ.ನಗರ ಸಮೀಪದ ಕನಕನಗರದಲ್ಲಿ ಎಕ್ಸ್‌ಲೆನ್ಸ್ ಎಂಟರ್‌ಪ್ರೈಸಸ್ ಕಂಪನಿ ಇರುವುದಾಗಿ ಸುಳ್ಳು ಹೇಳುತ್ತಿದ್ದ ಆರೋಪಿ, ಕೃತ್ಯ ಎಸಗುತ್ತಿದ್ದ. ಈ ಸಂಬಂಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ಅದರ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇ–ಮೇಲ್, ಮೊಬೈಲ್‌ ಕರೆಗಳ ಮೂಲಕ ಸಾರ್ವಜನಿಕರು ಹಾಗೂ ಬಿಲ್ಡರ್ಸ್‌ಗಳನ್ನು ಆರೋಪಿ ಸಂಪರ್ಕಿಸುತ್ತಿದ್ದ. ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಕಂಪನಿಗಳ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರುವುದಾಗಿ ಹೇಳುತ್ತಿದ್ದ. ಅದನ್ನು ನಂಬಿದ್ದ ಹಲವರು, ಆತನ ಖಾತೆಗೆ ಹಣ ಜಮೆ ಮಾಡುತ್ತಿದ್ದರು. ಅದಾಗ ನಂತರ ಆರೋಪಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ’ ಎಂದೂ ತಿಳಿಸಿದರು.

ADVERTISEMENT

‘ಆರೋಪಿ ವಿರುದ್ಧ ಸದ್ಯ ಒಂದೇ ಪ್ರಕರಣ ದಾಖಲಾಗಿದೆ. ಈತ ಹಲವರಿಗೆ ವಂಚಿಸಿರುವ ಮಾಹಿತಿ ಇದೆ, ಯಾರಾದರೂ ದೂರು ನೀಡುವವರು ಇದ್ದರೆ ಪೊಲೀಸ್ ಠಾಣೆಗೆ ದೂರು ನೀಡಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.