ADVERTISEMENT

ಕೋವಿಡ್‌ ಹೆಸರಿನಲ್ಲಿ BBMPಗೆ ಲಕ್ಷಾಂತರ ವಂಚನೆ: ರಮೇಶ್‌ ಎನ್.ಆರ್‌. ದೂರು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್‌ ಎನ್.ಆರ್‌. ದೂರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 20:37 IST
Last Updated 16 ಏಪ್ರಿಲ್ 2024, 20:37 IST
ಬಿಬಿಎಂಪಿ ಲೋಗೊ
ಬಿಬಿಎಂಪಿ ಲೋಗೊ   

ಬೆಂಗಳೂರು: ‘ಬಿಬಿಎಂಪಿ ಶಾಂತಿನಗರ ವಿಭಾಗದ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಕೆಲಸಕ್ಕೆ ವಲಯ ಆಯುಕ್ತರ ಅನುಮೋದನೆ ಪಡೆಯದೆ ಲಕ್ಷಾಂತರ ರೂಪಾಯಿಯನ್ನು ಅಕ್ರಮವಾಗಿ ಬಿಡುಗಡೆ ಮಾಡಲಾಗಿದೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್‌ ಎನ್.ಆರ್‌. ಆರೋಪಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಹಾಗೂ ಬಿಎಂಟಿಎಫ್‌ ಪೊಲೀಸ್‌ ಅಧೀಕ್ಷಕರಿಗೆ ಪತ್ರ ಬರೆದು, ದಾಖಲೆಗಳನ್ನು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

‘ಕೋವಿಡ್ - 19 ಎರಡನೇ ಅಲೆಯ ಸಂದರ್ಭದಲ್ಲಿ ಬಿಬಿಎಂಪಿ ಪೂರ್ವ ವಲಯದ ಆರೋಗ್ಯ ಅಧಿಕಾರಿಯಾಗಿದ್ದ ಡಾ. ಸವಿತಾ ಹಾಗೂ ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಶ್ರೀನಿವಾಸ್ ಗೌಡ ಅವರು, ಪಾಲಿಕೆಯ ಸಿಬ್ಬಂದಿಗೇ ‘ಎಂಒಎಚ್‌ ಶಾಂತಿನಗರ ರೇಂಜ್‌ ಕೋವಿಡ್‌ ಸ್ಟ್ಯಾಫ್‌ ಡಿಇಒ ಆ್ಯಂಡ್‌ ಸ್ವಾಬ್‌ ಕಲೆಕ್ಟರ್ಸ್‌ ಸ್ಯಾಲರಿ ಬಿಲ್’ ಎಂದು ಡಿಸಿ ಬಿಲ್‌ಗಳ ಮೂಲಕ ತಲಾ ₹75,225 ಅನ್ನು 10 ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ನಂತರ ಆ ಹಣವನ್ನು ಸವಿತಾ ಅವರ ಮಗನಾದ ಸಿದ್ಧರಾಜು ಚಿರಾಗ್‌ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಪಾಲಿಕೆ ವಂಚನೆ ಮಾಡಿರುವ ಡಾ.ಸವಿತಾ ಮತ್ತು ಡಾ. ಶ್ರೀನಿವಾಸ್ ಗೌಡ ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಬಿಬಿಎಂಪಿ ಮುಖ್ಯ ಆಯುಕ್ತರು ಈ ವಂಚನೆ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ರಮೇಶ್‌ ತಿಳಿಸಿದರು.

ವರ್ಗಾವಣೆ: ಮಗನ ಒಡೆತನದ ನಕಲಿ ಸಂಸ್ಥೆಗೆ ಕಾರ್ಯಾದೇಶ ನೀಡಿ ಅಕ್ರಮ ಎಸಗಿರುವ ಪೂರ್ವ ವಲಯದ ಆರೋಗ್ಯಾಧಿಕಾರಿ ಡಾ. ಸವಿತಾ ಅವರನ್ನು ಕರ್ತವ್ಯಲೋಪದ ಮೇರೆಗೆ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಹಣ ದುರುಪಯೋಗದ ಆರೋಪವೂ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.