ADVERTISEMENT

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 19:02 IST
Last Updated 21 ಜೂನ್ 2018, 19:02 IST
ಕೆಂಪರಾಜು
ಕೆಂಪರಾಜು   

ಬೆಂಗಳೂರು: ಕೃಷಿ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಹಾಗೂ ವೀರಮರಣ ಹೊಂದಿದ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಘೋಷಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಟಿ.ಡಿ. ಕೆಂಪರಾಜು, ‘ವಿಶ್ವವಿದ್ಯಾಲಯದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಈ ಕೆಲಸ ಮಾಡುತ್ತೇವೆ. ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ನಮ್ಮ ವಿಶ್ವವಿದ್ಯಾಲಯಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಈ ಅನುಕೂಲ ಮಾಡಿಕೊಡಲಾಗುತ್ತದೆ’ ಎಂದರು.

₹100 ಕೋಟಿ ಅನುದಾನಕ್ಕೆ ಬೇಡಿಕೆ: ‘ಸರ್ಕಾರ ಮಂಜೂರು ಮಾಡಿದ್ದ 110.25 ಎಕರೆ ಜಮೀನು ಈಗಾಗಲೇ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾಗಿದೆ. ಹೀಗಾಗಿ ಕ್ಯಾಂಪಸ್‌ ನಿರ್ಮಿಸಲು ₹100 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ADVERTISEMENT

‘ಇನ್ನೆರಡು ದಿನಗಳಲ್ಲಿ ಬಜೆಟ್‌ ಪೂರ್ವಸಭೆ ನಿಗದಿಯಾಗಿದ್ದು, ನಮ್ಮ ಪ್ರಸ್ತಾವನ್ನು ಮಂಡಿಸುತ್ತೇವೆ. ಮೊದಲ ಹಂತದಲ್ಲಿಆಡಳಿತಾತ್ಮಕ ಕಟ್ಟಡ, ಗ್ರಂಥಾಲಯ, ಶೈಕ್ಷಣಿಕ ಕಟ್ಟಡ, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಯೋಜಿಸಲಾಗಿದೆ’ ಎಂದರು.

‘ಇದೇ ಬಜೆಟ್‌ನಲ್ಲಿ ನಾವು ಕೋರಿದ ಅನುದಾನ ದೊರೆತರೆ, ಒಂದು ವರ್ಷದಲ್ಲಿ ಕ್ಯಾಂಪಸ್‌ ನಿರ್ಮಾಣವಾಗಲಿದೆ. ಲೋಕೋಪಯೋಗಿ ಇಲಾಖೆಗೆ ನಿರ್ಮಾಣ ಜವಾಬ್ದಾರಿಯನ್ನು ನೀಡಲಿದ್ದೇವೆ’ ಎಂದು ವಿವರಿಸಿದರು.

ಹೊಸ ಕೋರ್ಸ್‌ ಪ್ರಾರಂಭ:ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸದಾಗಿ 8 ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದೆ.

ಕೋಲಾರದಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಸಮಾಜಕಾರ್ಯ ಕೋರ್ಸ್‌ಗಳಿವೆ. ಇದರ ಜೊತೆಗೆ ಇಂಗ್ಲಿಷ್‌, ರಾಜ್ಯಶಾಸ್ತ್ರ. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ, ಗಣಿತ, ಭೌತ ವಿಜ್ಞಾನ, ಗಣಕ ವಿಜ್ಞಾನ, ಸಸ್ಯವಿಜ್ಞಾನ ಕೋರ್ಸ್‌ಗಳು ಆರಂಭವಾಗಲಿವೆ.

ಪದವಿಯಲ್ಲಿ ನಾಲ್ಕು ಹೊಸ ಕೋರ್ಸ್‌ಗಳನ್ನು (ಬಿಬಿಎಂ, ವಿಮಾನಯಾನ, ಅನಿಮೇಷನ್‌ ಮತ್ತು ಮಲ್ಟಿಮೀಡಿಯಾ, ಒಳಾಂಗಣ ವಿನ್ಯಾಸ, ತರ್ಕಶಾಸ್ತ್ರ) ವಿಶ್ವವಿದ್ಯಾಲಯ ಪರಿಚಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.