ADVERTISEMENT

ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 23:30 IST
Last Updated 29 ಜನವರಿ 2026, 23:30 IST
<div class="paragraphs"><p>‘ನಮ್ಮ&nbsp;ಮೆಟ್ರೊ’</p></div>

‘ನಮ್ಮ ಮೆಟ್ರೊ’

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಸೈಕಲ್‌ ಪಾರ್ಕಿಂಗ್‌ ಮಾಡಲು ವಿಧಿಸುತ್ತಿದ್ದ ಗಂಟೆಗೆ ₹ 1 ಹಾಗೂ ದಿನಕ್ಕೆ ₹ 10 ಶುಲ್ಕವನ್ನು ಬಿಎಂಆರ್‌ಸಿಎಲ್‌ ತೆಗೆದು ಹಾಕಿದೆ. ಸೈಕಲ್‌ಗಳನ್ನು ಉಚಿತವಾಗಿ ಪಾರ್ಕಿಂಗ್ ಮಾಡಲು ಅವಕಾಶ ನೀಡುವ ಮೂಲಕ ಪರಿಸರ ಸ್ನೇಹಿ ಸಂಚಾರಕ್ಕೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.

ADVERTISEMENT

ಸೈಕಲ್‌ ಪಾರ್ಕಿಂಗ್‌ಗಾಗಿ ಬಿಡ್ ಕರೆಯಲಾಗಿದೆ. ಹೊಸ ಆಪರೇಟರ್‌ ಆಯ್ಕೆ ಪೂರ್ಣಗೊಂಡ ನಂತರ 9 ಮೆಟ್ರೊ ನಿಲ್ದಾಣಗಳಲ್ಲಿ ಉಚಿತವಾಗಿ ಸೈಕಲ್‌ ಪಾರ್ಕಿಂಗ್‌ ಸೌಲಭ್ಯ ಜಾರಿಗೆ ಬರುತ್ತದೆ. ಹಸಿರು ಮಾರ್ಗದಲ್ಲಿ ಮಾದಾವರ, ಪೀಣ್ಯ ಇಂಡಸ್ಟ್ರಿ ಮತ್ತು ಜೆ.ಪಿ. ನಗರ, ಹಳದಿ ಮಾರ್ಗದಲ್ಲಿ ಬಿ.ಟಿ.ಎಂ. ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಗಿಗುಡ್ಡ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣ, ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿಯಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.

ನಮ್ಮ ಮೆಟ್ರೊ 65 ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಇಲ್ಲಿ ಸೈಕಲ್‌ಗಳನ್ನು ಉಚಿತವಾಗಿ ನಿಲ್ಲಿಸಲು ಅವಕಾಶ ನೀಡುವಂತೆ ಹಿಂದೆಯೇ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಹಾಗಾಗಿ ಕಳೆದ ಆರು ತಿಂಗಳಿನಿಂದ ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್‌ ದೊರೆಯುತ್ತಿದೆ. ಇನ್ನು ಮುಂದೆ ಪಾರ್ಕಿಂಗ್‌ಗೆ ಟೆಂಡರ್‌ ಕರೆಯುವಾಗ ಅಧಿಕೃತವಾಗಿಯೇ ಸೈಕಲ್‌ಗಳಿಗೆ ಉಚಿತವಾಗಿ ಪಾರ್ಕಿಂಗ್‌ ನೀಡುವ ಷರತ್ತು ಇರಲಿದೆ ಎಂದು ಬಿಎಂಆರ್‌ಸಿಎಲ್‌ ಉಪಪ್ರಧಾನ ವ್ಯವಸ್ಥಾಪಕ (ಸಂಪರ್ಕ) ಆರ್‌. ಮುನಿವೀರೇಗೌಡ ಮಾಹಿತಿ ನೀಡಿದ್ದಾರೆ.

‘ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಮೆಟ್ರೊ ನಿಲ್ದಾಣಗಳ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸುವ ವಾಹನಗಳ ಸಂಖ್ಯೆ ಅದರಲ್ಲಿಯೂ ದ್ವಿಚಕ್ರವಾಹನಗಳು ಅಧಿಕವಾಗುತ್ತಿವೆ. ಸೈಕಲ್‌ಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇರುವಲ್ಲಿ ಮಾತ್ರವಲ್ಲ, ಇಂಥ ಕಡೆಗಳಲ್ಲಿಯೂ ಸೈಕಲ್‌ ನಿಲ್ಲಿಸಲು ಜಾಗವಿದ್ದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸೈಕಲ್‌ ಬಳಸುತ್ತಿದ್ದಾರೆ. ಉಳಿದವರು ಕೂಡಾ ಸೈಕಲ್‌ ಬಳಸುವಂತಾಗಬೇಕು. ಪರಿಸರ ಮಾಲಿನ್ಯ ಕಡಿಮೆಯಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.