ADVERTISEMENT

ಇನ್‌ಸ್ಟಾಗ್ರಾಂಗೆ ಪಿಯುಸಿ ಸ್ನೇಹಿತೆಯ ಅರೆನಗ್ನ ಫೋಟೊ ಅಪ್‌ಲೋಡ್ ಮಾಡಿದ ಯುವಕ!

ಪಿಯು ಸ್ನೇಹಿತನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 20:45 IST
Last Updated 24 ಅಕ್ಟೋಬರ್ 2021, 20:45 IST
   

ಬೆಂಗಳೂರು: ಪಿಯುಸಿ ಸ್ನೇಹಿತೆ ಜೊತೆ ಸಲುಗೆ ಬೆಳೆಸಿ ಆಕೆಯ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡು ಇನ್‌ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದ ಬಗ್ಗೆ ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

’21 ವರ್ಷದ ಯುವತಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ಎನ್ನಲಾದ ಉದಯ್ ಕಿರಣ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನಗರದ ಕಾಲೇಜೊಂದರಲ್ಲಿ ಯುವತಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಪಿಯುಸಿ ಸ್ನೇಹಿತನಾದ ಆರೋಪಿ, ಆಗಾಗ ಯುವತಿ ಜೊತೆ ಮಾತನಾಡುತ್ತಿದ್ದ. ನಂತರ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ರಾಯಚೂರಿನ ಆರೋಪಿ, ಯುವತಿಯನ್ನು ಭೇಟಿಯಾಗಲೆಂದು ಇತ್ತೀಚೆಗೆ ನಗರಕ್ಕೆ ಬಂದಿದ್ದ.

‘ಯುವತಿಯನ್ನು ಜಕ್ಕೂರು ಬಳಿಯ ವಸತಿಗೃಹವೊಂದಕ್ಕೆ ಕರೆದೊಯ್ದಿದ್ದ ಆರೋಪಿ, ಅಲ್ಲಿಯೇ ಒಂದು ದಿನ ಕಳೆದಿದ್ದ. ಅದೇ ಸಂದರ್ಭದಲ್ಲಿ ಯುವತಿಯ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡಿದ್ದ. ಇದಾದ ಕೆಲ ತಿಂಗಳ ನಂತರ, ಯುವತಿಗೆ ವಿಷಯ ಗೊತ್ತಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಆರೋಪಿ ವರ್ತನೆಯಿಂದ ಬೇಸತ್ತ ಯುವತಿ, ಆತನನ್ನು ದೂರ ಮಾಡಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ ಯುವತಿಯ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದಿದ್ದ. ಅದೇ ಖಾತೆಯಲ್ಲಿ ಅವರ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದ. ಅದನ್ನು ನೋಡಿದ್ದ ಯುವತಿ, ತಂದೆಗೆ ವಿಷಯ ತಿಳಿಸಿದ್ದರು. ಆರೋಪಿಗೆ ಕರೆ ಮಾಡಿದ್ದ ತಂದೆ, ಫೋಟೊ ಹಾಗೂ ವಿಡಿಯೊ ಅಳಿಸಿಹಾಕುವಂತೆ ಹೇಳಿದ್ದರು.’

‘ತಂದೆ ವಿರುದ್ಧವೇ ಆರೋಪಿ ಹರಿಹಾಯ್ದು, ನಿಂದಿಸಿದ್ದ. ನಂತರ, ಯುವತಿ ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.