ADVERTISEMENT

ಮಾನವರಹಿತ ‘FWD–ಬಾಂಬರ್‌’: ಭಾರತದ ಪ್ರಥಮ ಇಂಡೀಜಿನಿಯಸ್‌ ಏರ್‌ಕ್ರಾಫ್ಟ್‌

ಭಾರತದ ಪ್ರಥಮ ಇಂಡೀಜಿನಿಯಸ್‌ ಏರ್‌ಕ್ರಾಫ್ಟ್‌

​ಪ್ರಜಾವಾಣಿ ವಾರ್ತೆ
ಬಾಲಕೃಷ್ಣ ‍ಪಿ.ಎಚ್‌.
Published 12 ಫೆಬ್ರುವರಿ 2025, 21:17 IST
Last Updated 12 ಫೆಬ್ರುವರಿ 2025, 21:17 IST
ಬೆಂಗಳೂರು ಅರಮನೆಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ 2025’ರ ವಸ್ತುಪ್ರದರ್ಶದಲ್ಲಿ ‘ಬಾಂಬರ್’ ಯುಎವಿ.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು ಅರಮನೆಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ 2025’ರ ವಸ್ತುಪ್ರದರ್ಶದಲ್ಲಿ ‘ಬಾಂಬರ್’ ಯುಎವಿ. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಬಾಂಬ್‌, ಕ್ಷಿಪಣಿ ಸ್ಫೋಟ ಸಹಿತ ವಿವಿಧ ಪ್ರಯೋಗಗಳನ್ನು ಯುದ್ಧರಂಗದಲ್ಲಿ ನಡೆಸುವಾಗ ಮಾನವ ಬಳಕೆ ಕಡಿಮೆ ಮಾಡಲು ಸ್ವಯಂಚಾಲಿತವಾಗಿ ಕೆಲಸ ಮಾಡುವ ‘ಎಫ್‌ಡಬ್ಲ್ಯುಡಿ–ಬಾಂಬರ್‌’ ಇದರ ಪ್ರತಿಕೃತಿಯು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೆಚ್ಚು ಆಕರ್ಷಣೆಗೆ ಪಾತ್ರವಾಗಿತ್ತು.

ಭಾರತದ ಪ್ರಥಮ ಇಂಡೀಜಿನಿಯಸ್‌ ಏರ್‌ಕ್ರಾಫ್ಟ್‌ ಎಂದು ಹೆಸರು ಪಡೆದಿರುವ ಈ ಬಾಂಬರ್‌ ಅನ್ನು ಎಲೆಕ್ಟ್ರಾನಿಕ್ಸ್‌ ಸಿಟಿಯ ‘ಫ್ಲೈಯಿಂಗ್‌ ವೆಡ್ಜ್‌ ಡಿಫೆನ್ಸ್ ಆ್ಯಂಡ್‌ ಏರೊಸ್ಪೇಸ್‌’ ಕಂಪನಿ ತಯಾರಿಸಿದೆ. ಲೇಸರ್‌ ಗೈಡೆಡ್‌ ರಾಕೆಟ್‌, ಕ್ಯಾಮೆರಾ ಮತ್ತು ಸಂವಹನ, ನೈಜ ಸಮಯದ ಕಾರ್ಯಾಚರಣೆ, ಗಡಿ ಭದ್ರತೆ, ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬಹುದಾದ ಮಾನವರಹಿತ ಯುದ್ಧ ವೈಮಾನಿಕ ವಾಹನ (ಯುಎವಿ) ಇದಾಗಿದೆ.

6.5 ಮೀಟರ್‌ ಉದ್ದ ಇರುವ ‘ಬಾಂಬರ್‌’ 102 ಕೆ.ಜಿ. ಭಾರವನ್ನು ಸಾಗಿಸಬಲ್ಲದು. ಒಮ್ಮೆ ಇಂಧನ ತುಂಬಿಸಿದರೆ 24 ಗಂಟೆ ಹಾರಾಟನಡೆಸಬಲ್ಲ ಸಾಮರ್ಥ್ಯ ಇರುವ ಈ ವೈಮಾನಿಕ ವಾಹನವನ್ನು ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲ, ತುರ್ತು ಸ್ಥಿತಿಯಲ್ಲಿ ಅತಿವೇಗದಲ್ಲಿ ಔಷಧ ಸಾಗಾಟಕ್ಕೆ ಬಳಕೆ ಮಾಡಬಹುದು. ಇನ್ನಿತರ ಅಗತ್ಯ ಸಂದರ್ಭದಲ್ಲಿಯೂ ಉಪಯೋಗಿಸಬಹುದು ಎಂದು ಕಂಪನಿಯ ಸಿಒಒ ನರಸಿಂಹ ಅವರು ಮಾಹಿತಿ ನೀಡಿದರು.

ADVERTISEMENT

‘ಮಾನವರಹಿತ ಯುದ್ಧ ವೈಮಾನಿಕ ವಾಹನದ ವಿನ್ಯಾಸ, ಎಂಜಿನ್‌ ತಯಾರಿಯಿಂದ ಹಿಡಿದು ಎಲ್ಲವನ್ನೂ ‘ಫ್ಲೈಯಿಂಗ್‌ ವೆಡ್ಜ್‌ ಡಿಫೆನ್ಸ್ ಆ್ಯಂಡ್‌ ಏರೊಸ್ಪೇಸ್‌’ ಕಂಪನಿಯೇ ತಯಾರಿಸಿದೆ. ಎಲೆಕ್ಟ್ರಾನಿಕ್ಸ್‌ ಸಿಟಿ ಮತ್ತು ಯಲಹಂಕದ ಎಲ್ಸಿಯಾದಲ್ಲಿ ತಯಾರಿಸಲಾಗಿದೆ. ನಮ್ಮ ಕಂಪನಿಯು ಡಿಆರ್‌ಡಿಒ, ಆರ್ಮಿ ಡಿಸೈನ್‌ ಬ್ಯೂರೊ ಸಹಿತ ವಿವಿಧ ಸಂಸ್ಥೆಗಳೊಂದಿಗೆ ಸಹಭಾಗಿ ಆಗಿದೆ’ ಎಂದು ವಿವರಿಸಿದರು.

‘ಇದರ ಅಂತರರಾಷ್ಟ್ರೀಯ ಬೆಲೆ ₹ 250 ಕೋಟಿ ಆಗಿದ್ದು, ನಾವು ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ತಯಾರಿಸಿರುವುದರಿಂದ ₹ 25 ಕೋಟಿಗೆ ಒದಗಿಸುತ್ತಿದ್ದೇವೆ. ಆಫ್ರಿಕಾದ ಒಂದು ದೇಶಕ್ಕೆ 35 ಬಾಂಬರ್‌ ಒದಗಿಸಲು ಕಾರ್ಯಾದೇಶ ನೀಡಿದ್ದು, ಮೊದಲ ಬಾಂಬರ್‌ ಎರಡು ವಾರದ ಒಳಗೆ ಕಳುಹಿಸಲಾಗುವುದು. ದೇಶದ ಹೆಸರನ್ನು ನಾವು ಬಹಿರಂಗಪಡಿಸುವಂತಿಲ್ಲ’ ಎಂದು ಹೇಳಿದರು.

ವಿವಿಧ ಯುಎವಿ: ‘ಬಾಂಬರ್‌’ ಅಲ್ಲದೇ ಲಂಬವಾಗಿ ಏರುವ ಮತ್ತು ಇಳಿಯುವ ಸಾಮರ್ಥ್ಯ ಇರುವ ‘ಲೊಟೆರಿಂಗ್‌ ಮನಿಷನ್‌’ ಯುಎವಿ ತಯಾರಿಸಲಾಗಿದೆ. ಇದು ಕಡಿಮೆ ಸ್ಥಳಾವಕಾಶ ಇರುವಲ್ಲಿಯೂ ಸಂಚರಿಸುವ, ಇಳಿಯುವ, ಟೇಕ್‌ ಆಫ್ ಆಗುವ ಶಕ್ತಿಯನ್ನು ಹೊಂದಿದೆ. ‘ಯಮ’ ಎಂಬ ಇನ್ನೊಂದು ಯುಎಇಯನ್ನು ‘ಆತ್ಮಾಹುತಿ ಏರ್‌ಕ್ರಾಫ್ಟ್‌’ ಎಂದೂ ಕರೆಯಲಾಗುತ್ತದೆ. ಇದು ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು ಮತ್ತು ಗಂಟೆಗೆ 320 ಕಿ.ಮೀ. ವೇಗದಲ್ಲಿ ದಾಳಿ ಮಾಡಬಲ್ಲದು ಎಂದು ನರಸಿಂಹ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.