ADVERTISEMENT

ಬೆಂಗಳೂರು: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಮುಜರಾಯಿ ಸುಪರ್ದಿಗೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 23:45 IST
Last Updated 10 ಜುಲೈ 2025, 23:45 IST
ಗಾಳಿ ಆಂಜನೇಯ ದೇವರ ವಿಗ್ರಹ
ಗಾಳಿ ಆಂಜನೇಯ ದೇವರ ವಿಗ್ರಹ   

ಬೆಂಗಳೂರು: ನಗರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ, ಕೆಲವು ವರ್ಷಗಳಿಂದ ವಿವಾದಕ್ಕೆ ಸಿಲುಕಿದ್ದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ.

ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ದೇವಾಲಯದಲ್ಲಿ ಆಡಳಿತ ನಿರ್ವಹಣೆ ಸರಿ ಇಲ್ಲ ಎಂಬುದನ್ನು ತೋರಿಸಿತ್ತು. ಈ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್‌ 42 ಮತ್ತು 43ರ ಅನ್ವಯ ಸರ್ಕಾರದ ವಶಕ್ಕೆ ಪಡೆಯಲು ಸ್ಪಷ್ಟ ಅಭಿಪ್ರಾಯದ ವರದಿ ನೀಡುವಂತೆ ಧಾರ್ಮಿಕ ದತ್ತಿ ಆಯುಕ್ತರು ಜಿಲ್ಲಾಧಿಕಾರಿಗೆ 2024ರ ಅಕ್ಟೋಬರ್‌ನಲ್ಲಿ ಸೂಚಿಸಿದ್ದರು.

ದೇವಸ್ಥಾನವನ್ನು ಮುಜರಾಯಿ ಇಲಾಖೆಯ ‘ಘೋಷಿತ ಸಂಸ್ಥೆ’ಯನ್ನಾಗಿ ಘೋಷಿಸಲು ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಲಾಗಿತ್ತು.

ADVERTISEMENT

‘ಲಕ್ಷಾಂತರ ರೂಪಾಯಿ ಆದಾಯ ಇರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳ ನಡುವೆ ಹೊಂದಾಣಿ ಇಲ್ಲ. ಪ್ರತಿವರ್ಷವೂ ಉಳಿತಾಯವಿಲ್ಲದಂತೆ ವೆಚ್ಚ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನದ ಹಣವು ದುರುಪಯೋಗವಾಗುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಅಲ್ಲದೇ ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ 25 ವರ್ಷಗಳಿಂದ ಯಾವುದೇ ದಾಖಲೆಗಳನ್ನು ಇಟ್ಟಿರಲಿಲ್ಲ. ಮುಜರಾಯಿ ಇಲಾಖೆ ನೋಟಿಸ್‌ ನೀಡಿದ ಬಳಿಕ ದಾಖಲೆಗಳನ್ನು ಸೃಷ್ಟಿಸಲಾಗಿದೆ. ದೇವಾಲಯದ ಸಿಬ್ಬಂದಿ ಹುಂಡಿ ಹಣ ಕದ್ದಿರುವ ಬಗೆಗಿನ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿ ಭಕ್ತರ ಧಾರ್ಮಿಕ ಭಾವನೆಗೆ ಕುಂದುಂಟಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಈ ವರದಿಯಂತೆ ಸಾರ್ವಜನಿಕರು ಮತ್ತು ಭಕ್ತರ ಹಿತದೃಷ್ಟಿಯಿಂದ ಈ ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆಯುವುದು ಸೂಕ್ತ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅದರಂತೆ ಈ ದೇವಸ್ಥಾನವನ್ನು ‘ಘೋಷಿತ ಸಂಸ್ಥೆ’ ಎಂದು ಘೋಷಿಸಿ ಮುಜರಾಯಿ ಇಲಾಖೆ ಜುಲೈ 8ರಂದು ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.