ADVERTISEMENT

ಉದ್ಘಾಟನೆಗೂ ಮುನ್ನವೇ ಕಳೆಗಟ್ಟಿದ ಪರಿಷೆ

25ರಿಂದ 27ರವರೆಗೆ ಜಾತ್ರೆ, ಬಸವನಗುಡಿ ರಸ್ತೆಯ ಇಕ್ಕೆಲಗಳಲ್ಲೂ ರಾಶಿ ರಾಶಿ ಕಡಲೆಕಾಯಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 5:16 IST
Last Updated 23 ನವೆಂಬರ್ 2019, 5:16 IST
ಕಡಲೆಕಾಯಿ ಪರಿಷೆಗೆ ಶುಕ್ರವಾರ ಸಿದ್ಧಗೊಳ್ಳುತ್ತಿರುವ ಬಸವನಗುಡಿ - ಪ್ರಜಾವಾಣಿ ಚಿತ್ರ
ಕಡಲೆಕಾಯಿ ಪರಿಷೆಗೆ ಶುಕ್ರವಾರ ಸಿದ್ಧಗೊಳ್ಳುತ್ತಿರುವ ಬಸವನಗುಡಿ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯ ಸಜ್ಜುಗೊಳ್ಳುತ್ತಿದೆ.

ಈ ಜಾತ್ರೆ ನಡೆಯುವುದು ಇದೇ 25ರಿಂದ 27ರವರೆಗೆ ಆದರೂ,ಈಗಾಗಲೇ ವ್ಯಾಪಾರ ಕಳೆಕಟ್ಟಿದೆ. ಬಸವನ ಗುಡಿ ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ರಾಶಿ ಗಮನ ಸೆಳೆಯುತ್ತಿದೆ.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಗೌರಿ ಬಿದನೂರು, ತುಮಕೂರು, ಚಿಂತಾಮಣಿ, ಕನಕಪುರ, ಮಾಗಡಿ, ರಾಮನಗರ, ಹೊಸಕೋಟೆ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ರೈತರು ಮತ್ತು ವ್ಯಾಪಾರಿಗಳು ತರೇವಾರಿ ಕಡಲೇಕಾಯಿಗಳನ್ನು ತಂದಿದ್ದಾರೆ.

ADVERTISEMENT

ಪ್ರತಿ ಸೇರು ಕಡಲೆಕಾಯಿಗೆ ₹ 20ನಿಂದ ₹ 35ವರೆಗೂ ಮಾರಾಟ ಮಾಡಲಾಗುತ್ತಿದೆ. ಆಟಿಕೆಗಳು, ಕರಕುಶಲ ವಸ್ತುಗಳು, ತಿಂಡಿ-ತಿನಿಸು ಗಳ ಹಲವು ಮಳಿಗೆಗಳನ್ನೂ ಇಲ್ಲಿ ಕಾಣಬಹುದಾಗಿದೆ.

ಬಣ್ಣ, ಗಾತ್ರ ಆಧರಿಸಿದ ಹಸಿ ಹಾಗೂ ಒಣ ಕಡಲೆಕಾಯಿಗಳ ನಡುವೆ ದರದಲ್ಲಿ ವ್ಯತ್ಯಾಸವಿದೆ. ನಾಟಿ, ಸಾಮ್ರಾಟ್, ಜೆಎಲ್‌, ಗಡಂಗ್, ಬಾದಾಮಿ ತಳಿಗಳ ಹಾಗೂ ಕಡುಮಣ್ಣಿನ ಬಣ್ಣದ ಕಾಯಿ, ಹುರಿದ ಮತ್ತು ಬೇಯಿಸಿದ ಕಡಲೆ ಕಾಯಿ ಹೀಗೆ ನಾನಾ ವಿಧದ ಕಡಲೆಕಾಯಿ ಜನರನ್ನು ಆಕರ್ಷಿಸುತ್ತಿದೆ.

ಒಂದು ಸೇರು (1 ಲೀ ಅಳೆಯಲು ಬಳಸುವ ಮಾಪಕದಷ್ಟು) ಕಡಲೆಕಾಯಿಗೆ ₹ 30ನಿಂದ ₹ 45 ವರೆಗೆ ಮಾರಾಟ ಮಾಡಲಾಗುತ್ತಿದೆ. ಬೇಯಿಸಿದ ಕಡಲೆಕಾಯಿ ದರ ಸೇರಿಗೆ ₹50 ನಿಗದಿಪಡಿಸಲಾಗಿದೆ.

ಸೋಮವಾರದಿಂದ ಪರಿಷೆ ಆರಂಭವಾಗಲಿದೆಯಾದರೂ ಶನಿವಾರ ಮತ್ತು ಭಾನುವಾರ ಉತ್ತಮ ವ್ಯಾಪಾರವಾಗುವ ನಿರೀಕ್ಷೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ.

‘ಪರಿಷೆ ಆರಂಭವಾದ ಬಳಿಕ ದರದಲ್ಲಿ ಸ್ವಲ್ಪ ಇಳಿಕೆಯಾಗಬಹುದು’ ಎನ್ನುತ್ತಾರೆ ಮಾರಾಟಗಾರರು.

ಪ್ಲಾಸ್ಟಿಕ್‌ ಚೀಲ ನಿಷೇಧ: ಪರಿಷೆಯಲ್ಲಿ ಪ್ಲಾಸ್ಟಿಕ್‌ ಚೀಲ ಬಳಕೆಗೆ ಬಿಬಿಎಂಪಿ ಕಡ್ಡಾಯವಾಗಿ ನಿಷೇಧ ಹೇರಿದೆ. ಅಲ್ಲದೆ, ಕಡಲೆಕಾಯಿ ಖರೀದಿಸುವವರು ಚೀಲವನ್ನೂ ತರಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ವ್ಯಾಪಾರಿಗಳು ಕೂಡಾ ಮಳಿಗೆಗಳಲ್ಲಿ ಜಾಗೃತಿ ಫಲಕವನ್ನು ಪ್ರದರ್ಶಿಸಿದ್ದಾರೆ.

‘ಕಳೆದ ವರ್ಷ ಸಗಟು ವ್ಯಾಪಾರ ಮಳಿಗೆಯಲ್ಲಿ ಕಡಲೆಕಾಯಿ ಮೂಟೆಗಳನ್ನು ಖರೀದಿಸಿ, ವ್ಯಾಪಾರ ಮಾಡಿದ್ದೆವು. ಈ ಬಾರಿ ಕೆ.ಜಿ. ರೂಪದಲ್ಲಿ ಖರೀದಿಸಿದ ಪರಿಣಾಮ ಸ್ವಲ್ಪ ದುಬಾರಿಯಾಗಿದೆ. ಪ್ರತಿ ವರ್ಷ ಪರಿಷೆಗೆ ತಂದ ಅಷ್ಟೂ ಕಡಲೆಕಾಯಿ ಮಾರಾಟ ವಾಗುತ್ತಿದೆ. ದೇವರ ಕೃಪೆಯಿಂದ ಲಾಭವಾಗುತ್ತಿದೆ’ ಎಂದು ವ್ಯಾಪಾರಿ ಮುನಿಸ್ವಾಮಿ ತಿಳಿಸಿದರು.

ವಾಹನಗಳಿಗೆ ಇಂದಿನಿಂದ ಪರ್ಯಾಯ ವ್ಯವಸ್ಥೆ

ಪರಿಷೆ ಹಿನ್ನೆಲೆಯಲ್ಲಿಇದೇ 23ರಿಂದ ಪರಿಷೆ ಮುಕ್ತಾಯ ಆಗುವವರೆಗೆ ಬಸವನಗುಡಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.

ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ವಾಣಿ ವಿಲಾಸ ರಸ್ತೆ ಮೂಲಕ ಮತ್ತು ಚಾಮರಾಜಪೇಟೆ 5ನೇ ಮುಖ್ಯರಸ್ತೆ ಹಾಗೂ ಗಾಂಧಿ ಬಜಾರ್‌ ಮುಖ್ಯರಸ್ತೆ ಕಡೆಯಿಂದ ಹನುಮಂತನಗರಕ್ಕೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಗವಿಪುರದ ಹಯವದನ ರಸ್ತೆ ಮೂರನೇ ಕ್ರಾಸ್‌ ಮೂಲಕ ಮೌಂಟ್‌ ಜಾಯ್‌ ರಸ್ತೆಯಾಗಿ ಹನುಮಂತ ನಗರಕ್ಕೆ ಹೋಗಬೇಕು.

ಬಸವನಗುಡಿ ರಸ್ತೆಯ ಶೇಖರ್‌ ಜಂಕ್ಷನ್‌ನಲ್ಲಿ ಅಯ್ಯಂಗಾರ್‌ ರಸ್ತೆ ಮೂಲಕ ಗವಿಪುರ ಎಕ್ಸ್‌ಟೆನ್ಷನ್‌ 3ನೇ ಕ್ರಾಸ್‌ ರಸ್ತೆಯಿಂದ ಮೌಂಟ್‌ ಜಾಯ್‌ ರಸ್ತೆ ಮೂಲಕ ಹನುಮಂತನಗರಕ್ಕೆ ಹೋಗಬೇಕು.

ನ್ಯಾಷನಲ್ ಕಾಲೇಜು ಆಟದ ಮೈದಾನ, ಎಪಿಎಸ್‌ ಕಾಲೇಜು ಮೈದಾನ, ಬಸವನಗುಡಿ ರಸ್ತೆ ಸಾಯಿರಂಗಾ (ಉದಯಭಾನು) ಆಟದ ಮೈದಾನಗಳಲ್ಲಿ ವಾಹನಗಳನ್ನು ನಿಲ್ಲಿಸಬಹುದಾಗಿದೆ.

***

15 ವರ್ಷಗಳಿಂದ ಪರಿಷೆಗೆ ಬರುತ್ತಿರುವೆ. 60ರಿಂದ 75 ಮೂಟೆ ತರುತ್ತಿದ್ದು, ಪರಿಷೆ ಮುಗಿಯುವಷ್ಟರಲ್ಲಿ ಅಷ್ಟೂ ಮಾರಾಟವಾಗುತ್ತಿದೆ. ಎಂದಿಗೂ ನಷ್ಟವಾಗಿಲ್ಲ.
-ರಾಜೇಂದ್ರ, ವ್ಯಾಪಾರಿ

ಪ್ರತಿವರ್ಷ ಪರಿಷೆಗೆ ಬರ್ತೀವಿ. ವ‌ರ್ಷದಿಂದ ವರ್ಷಕ್ಕೆ ಮಾರಾಟಗಾರರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಖ್ಯ ರಸ್ತೆಯಲ್ಲಿ ಸ್ಥಳಾವಕಾಶದ ಸಮಸ್ಯೆ ಉಂಟಾಗಿದೆ.
-ಪದ್ಮಾವತಿ, ತಮಿಳುನಾಡು ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.