ADVERTISEMENT

ಬೆಂಗಳೂರು: ನಗರದ ವಿವಿಧೆಡೆ ಗಾಂಧಿ ಜಯಂತಿ ಆಚರಣೆ

ಗಾಂಧೀಜಿಗೆ ನಮನ ಸಲ್ಲಿಸಿದ ಪಾಲಿಕೆ, ರೈಲ್ವೆ, ವಿವಿ, ಸಂಘ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 16:04 IST
Last Updated 2 ಅಕ್ಟೋಬರ್ 2025, 16:04 IST
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು   

ಬೆಂಗಳೂರು: ನಗರದ ವಿವಿಧೆಡೆ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಪಾಲಿಕೆ: ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಉದ್ಯಾನದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪನಮನ ಸಲ್ಲಿಕೆ ಹಾಗೂ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು.

ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಮಾಜಿ ಸಚಿವ ರಾಮಚಂದ್ರಗೌಡ, ಮಾಜಿ ಮೇಯರ್‌ಗಳಾದ ಜೆ.ಹುಚ್ಚಪ್ಪ, ಎಂ. ರಾಮಚಂದ್ರಪ್ಪ, ಜಂಟಿ ಆಯುಕ್ತ ರಂಗನಾಥ್, ಮುಖ್ಯ ಎಂಜಿನಿಯರ್‌ ಸುಗುಣ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT

ನಗರ ವಿ.ವಿ: ‘ಗಾಂಧೀಜಿಯವರ ಸರ್ವೋದಯ ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯ ತತ್ವಗಳು ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ’ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ರಮೇಶ್ ಬಿ. ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ವಿರುದ್ಧ ನಿರಂತರ ಹೋರಾಟ ನಡೆಸಿದ ಗಾಂಧೀಜಿ, ಅಂತರ್ಜಾತಿ ವಿವಾಹ ಮತ್ತು ಸಹಭೋಜನದ ಮೂಲಕ ಜನಜಾಗೃತಿ ಮೂಡಿಸಿದ್ದರು ಎಂದರು.

ಬಿಸಿಯು ಕುಲಸಚಿವರಾದ ನವೀನ್ ಜೋಸೆಫ್, ಕೆ.ಆರ್. ಜಲಜಾ, ಸಿಂಡಿಕೇಟ್ ಸದಸ್ಯರಾದ ಫಾದರ್ ಫ್ರಾನ್ಸಿಸ್, ಶಿವಕುಮಾರ್, ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್, ಪ್ರಾಧ್ಯಾಪಕರಾದ ರಮೇಶ್ ಕುಡೇನಟ್ಟಿ, ರಿತಿಕಾ ಸಿನ್ಹಾ ಭಾಗವಹಿಸಿದ್ದರು.

ನ್ಯಾಷನಲ್ ಎಜುಕೇಶನ್ ಸೊಸೈಟಿ: ಬಸವನಗುಡಿಯ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ ವತಿಯಿಂದ ಗಾಂಧೀಜಿ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಎನ್.ಇ.ಎಸ್. ಸಂಸ್ಥೆಯ ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ, ಜಂಟಿ ಕಾರ್ಯದರ್ಶಿ ಸುಧಾಕರ ಇಸ್ತೂರಿ, ಪ್ರಾಂಶುಪಾಲ ಪಿ.ಎಲ್. ರಮೇಶ್, ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ, ನ್ಯಾಷನಲ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ವೆಂಕಟರಾಮ ಭಟ್ಟರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಾಸಂತಿ, ನ್ಯಾಷನಲ್ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯರಾದ ಸುನಿತಾ ಉಪಸ್ಥಿತರಿದ್ದರು.

ರೈಲ್ವೆ: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್‌ ಕುಮಾರ್‌ ಸಿಂಗ್‌ ಅವರು ಕೆ.ಎಸ್‌.ಆರ್‌. ಬೆಂಗಳೂರು ರೈಲು ನಿಲ್ದಾಣದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. 

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್‌ ಮೋಹನ್‌ ಪೂರಿಯಾ, ಪ್ರವೀಣ್‌ ಕಾತರಕಿ, ಹಿರಿಯ ವಿಭಾಗೀಯ ಯಾಂತ್ರಿಕ ಎಂಜಿನಿಯರ್‌ ಅನುರಾಗ್‌ ಸಿಂಗ್‌ ಭಾಗವಹಿಸಿದ್ದರು.

ಸ್ವಚ್ಛತಾ ಪಾಕ್ಷಿಕ ಮತ್ತು ವಿಶೇಷ ಅಭಿಯಾನವನ್ನು ಆರಂಭಿಸಲಾಯಿತು. ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಸ್ವಚ್ಚತೆಯ ಪ್ರತಿಜ್ಞೆಯನ್ನು ಆಶುತೋಷ್‌ ಕುಮಾರ್‌ ಸಿಂಗ್‌ ಬೋಧಿಸಿದರು. ಪ್ರಯಾಣಿಕರಿಗೆ ಬಟ್ಟೆಯ ಬ್ಯಾಗ್‌ಗಳನ್ನು ವಿತರಿಸಲಾಯಿತು. ಏಕಬಳಕೆಯ ಪ್ಲಾಸ್ಟಿಕ್‌ ಬಳಸದಂತೆ ಸಲಹೆ ನೀಡಲಾಯಿತು.

ರೈಲ್ವೆ ಆವರಣ ಮತ್ತು ರೈಲುಗಳನ್ನು ಸ್ವಚ್ಚವಾಗಿಡಲು ಪ್ರತಿಜ್ಞೆ ಮಾಡುವ ‘ಸಹಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಯಿತು. ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ನಡೆಸಲಾದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವಚ್ಛತೆಯ ಸಂದೇಶವನ್ನು ನೀಡುವ ಕಂಸಾಳೆ ಪ್ರದರ್ಶನ ಮತ್ತು ಕಿರು ನಾಟಕ ಪ್ರದರ್ಶನ ಏರ್ಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.