ADVERTISEMENT

ಗಾಂಧೀಜಿ ಹಿಂದುತ್ವವಾದಿಯಲ್ಲ, ನೈಜ ಹಿಂದು–ಸಾಹಿತಿ ಮೀನಾಕ್ಷಿ ಬಾಳಿ

‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:08 IST
Last Updated 23 ಜನವರಿ 2026, 16:08 IST
‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಎಚ್.ಎನ್. ಸುಬ್ರಹ್ಮಣ್ಯ, ಮೀನಾಕ್ಷಿ ಬಾಳಿ, ಮಾನಸ, ಕೆ.ಬಿ. ಕಿರಣ್ ಸಿಂಗ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಎಚ್.ಎನ್. ಸುಬ್ರಹ್ಮಣ್ಯ, ಮೀನಾಕ್ಷಿ ಬಾಳಿ, ಮಾನಸ, ಕೆ.ಬಿ. ಕಿರಣ್ ಸಿಂಗ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಲ್ಲರ ಏಳಿಗೆ ಬಯಸಿದ ಮಹಾತ್ಮ ಗಾಂಧಿ ನೈಜ ಹಿಂದೂ. ಧರ್ಮದ ಆಧಾರದಲ್ಲಿ ಇನ್ನೊಂದು ಧರ್ಮವನ್ನು ದ್ವೇಷಿಸುವ, ಕೊಲೆ ಮಾಡಬೇಕೆನ್ನುವ ಹಿಂದುತ್ವವಾದಿ ಆಗಿರಲಿಲ್ಲ. ಹಿಂದುತ್ವವಾದಿಗಳು ಎಂದಿಗೂ ಗಾಂಧೀಜಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಾಹಿತಿ ಮೀನಾಕ್ಷಿ ಬಾಳಿ ತಿಳಿಸಿದರು.

ಮಹಾತ್ಮ ಗಾಂಧಿ ಅವರ ‘ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ’ ಕೃತಿಗೆ 100 ವರ್ಷ ತುಂಬಿರುವ ಪ್ರಯುಕ್ತ ಕನ್ನಡ ಪುಸ್ತಕ ಪ್ರಾಧಿಕಾರವು ‘ಎನ್ಇಎಸ್‌ ಆಫ್‌ ಕರ್ನಾಟಕ’ ಇದರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧೀಜಿಯಿಂದಾಗಿ ದೇಶ ಇಬ್ಭಾಗವಾಯಿತು. ಪಾಕಿಸ್ತಾನದ ಮುಸ್ಲಿಮರ ಪರ ಸತ್ಯಾಗ್ರಹ ಕುಳಿತರು. ಅದಕ್ಕಾಗಿ ಅವರ ಕೊಲೆಯಾಯಿತು ಮುಂತಾದ ಸಂಕಥನಗಳ ಮೂಲಕ ಸುಳ್ಳು ಹರಡಲಾಗಿದೆ. ದೇಶ ಇಬ್ಭಾಗದ ವಿರುದ್ಧ ಗಾಂಧೀಜಿ ಇದ್ದರು. ಎರಡು ದೇಶ ಸಿದ್ಧಾಂತವನ್ನು ಮೊದಲು ಇಟ್ಟವರೇ ಸಾವರ್ಕರ್‌. ಅಲ್ಲದೇ ಎರಡು ದೇಶ ಸಿದ್ಧಾಂತ ಹುಟ್ಟುವ ಮೊದಲೇ ಆರು ಬಾರಿ ಗಾಂಧೀಜಿಯ ಕೊಲೆಯತ್ನ ನಡೆದಿತ್ತು’ ಎಂದು ವಿವರಿಸಿದರು.

ADVERTISEMENT

‘ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿ ಕೊನೆಗೆ ಹಿಂಸೆಗೆ, ಗುಂಡಿಗೆ ಬಲಿಯಾಗಿದ್ದು ವಿಪರ್ಯಾಸ. ಗಾಂಧೀಜಿ ಸಾವನ್ನು ಸಂಭ್ರಮಿಸುವವರ, ಸಮರ್ಥಿಸುವವರ ನಡುವೆ ನಾವು ಬದುಕುತ್ತಿದ್ದೇವೆ’ ಎಂದು ಹೇಳಿದರು.

‘ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರಹಾಕಿದಾಗ, ಕುದುರೆ ಗಾಡಿಯಿಂದ ಹೊಡೆದು ಇಳಿಸಿದಾಗ ಗಾಂಧೀಜಿಯ ಸ್ವಾಭಿಮಾನಕ್ಕೆ ಏಟು ಬಿತ್ತು. ಆದರೆ, ಇಂದು ನಮ್ಮ ಜನರ ಸ್ವಾಭಿಮಾನವನ್ನು ಸುಟ್ಟುಹಾಕಲಾಗಿದೆ. ಸರ್ವನಾಶ ಮಾಡಲಾಗಿದೆ. ಮಹಿಳೆಯರು, ದಲಿತರು ಸೇರಿದಂತೆ ಯಾರ ಮೇಲೆಯಾದರೂ ದಬ್ಬಾಳಿಕೆ, ಪರಂಪರೆಯ ಹೆಸರಲ್ಲಿ ದೌರ್ಜನ್ಯ ನಡೆದರೆ ಅದು ತಪ್ಪು ಎಂದು ಹೇಳದಂತಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಸ್ಯಾಹಾರಿಯಾಗಿದ್ದ ಅವರು ಎಂದಿಗೂ ತನ್ನ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಲಿಲ್ಲ. ಜೊತೆಗೆ ಮಾಂಸಾಹಾರಿಗಳನ್ನು ಕೀಳಾಗಿ ಕಾಣಲಿಲ್ಲ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಎಚ್.ಎನ್. ಸುಬ್ರಹ್ಮಣ್ಯ, ಪ್ರಾಂಶುಪಾಲ ಪಿ.ಎಲ್. ರಮೇಶ್, ಉಪ ಪ್ರಾಂಶುಪಾಲರಾದ  ಅಲಕಾನಂದ, ಕನ್ನಡ ವಿಭಾಗದ ಮುಖ್ಯಸ್ಥ ಬಿ. ಪಾಪಣ್ಣ, ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.