ಬೆಂಗಳೂರು: ಉದ್ಯೋಗ ಇನ್ನಿತರ ಕಾರಣಗಳಿಗಾಗಿ ಊರು ಬಿಟ್ಟು ನಗರಕ್ಕೆ ಬಂದಿರುವ ಜನರು ಗೌರಿ–ಗಣೇಶ ಹಬ್ಬದ ನಿಮಿತ್ತ ಎರಡು ದಿನಗಳ ಹಿಂದೆಯೇ ತಮ್ಮ ಊರುಗಳಿಗೆ ಹೋಗಿರುವುದರಿಂದ ನಗರದ ಬಸ್ ನಿಲ್ದಾಣಗಳಲ್ಲಿ ಅಷ್ಟೊಂದು ಜನದಟ್ಣಣೆ, ವಾಹನ ದಟ್ಟಣೆ ಉಂಟಾಗಿಲ್ಲ. ಕೆಎಸ್‌ಆರ್‌ಟಿಸಿಯು ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ 1500 ಬಸ್‌ಗಳನ್ನು ಸೋಮವಾರ ರಸ್ತೆಗಿಳಿಸಿದೆ.
ಬೆಂಗಳೂರಿನಿಂದ ಹೊರಗೆ ಹೋಗುವವರ ಸಂಖ್ಯೆ ಶುಕ್ರವಾರ, ಶನಿವಾರ ಹೆಚ್ಚಿತ್ತು. ಭಾನುವಾರ, ಸೋಮವಾರ ಬೇರೆ ದಿನಗಳಿಗಿಂತ ಸ್ವಲ್ಪ ಅಧಿಕವಾಗಿದ್ದರೂ, ಹಬ್ಬದ ಹಿಂದಿನ ದಿನಗಳಲ್ಲಿ ಕಾಣುವಷ್ಟು ದಟ್ಟಣೆ ಕಂಡು ಬಂದಿಲ್ಲ. ಲಗೇಜುಗಳೊಂದಿಗೆ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣಗಳ ಕಡೆಗೆ ಒಂದಷ್ಟು ಜನರು ಬರುತ್ತಿರುವುದು ಕಂಡುಬಂತು.
ವಾರಾಂತ್ಯದ ರಜೆಗಳೊಂದಿಗೆ ಸೋಮವಾರ ಒಂದು ರಜೆ ಹಾಕಿಕೊಂಡರೆ ಗೌರಿ ಗಣೇಶ ಹಬ್ಬಕ್ಕೆ ಐದು ದಿನ ರಜೆ ಸಿಗುವುದರಿಂದ ಅನೇಕರು ಬೇಗನೇ ಊರಿಗೆ ಹೊರಟಿದ್ದರಿಂದ ಈ ಬಾರಿ ದಟ್ಟಣೆ ಕಂಡು ಬಂದಿಲ್ಲ. ಇಲ್ಲದೇ ಇದ್ದರೆ ಹಬ್ಬದ ಹಿಂದಿನ ಎರಡು ದಿನಗಳಲ್ಲಿ ವಿಪರೀತ ಜನಸಂಚಾರ ಇರುತ್ತಿತ್ತು ಎಂದು ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ತಿಳಿಸಿದರು.
ಹೆಚ್ಚುವರಿ ಬಸ್: ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಕೆಎಸ್‌ಆರ್‌ಟಿಸಿ, ಹೆಚ್ಚುವರಿಯಾಗಿ 1,500 ಬಸ್‌ಗಳ ವ್ಯವಸ್ಥೆ ಮಾಡಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಹಾಗೂ ಹೊರರಾಜ್ಯಗಳ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಪಾಲಕ್ಕಾಡ್, ಎರ್ನಾಕುಲಂ, ತಿರುಪತಿ, ವಿಜಯವಾಡ ಸಹಿತ ವಿವಿಧೆಡೆ ವಿಶೇಷ ಬಸ್‌ಗಳು ಸಂಚರಿಸುತ್ತಿವೆ. ಎಲ್ಲ ತಾಲ್ಲೂಕು, ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕೆ ಅನುಗುಣವಾಗಿ ವಿಶೇಷ ಬಸ್ ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ನಗರದಿಂದ ಹೊರಗೆ ಸಂಚರಿಸಲು ಬಿಎಂಟಿಸಿ ಬಸ್‌ಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಖಾಸಗಿ ಕಂಪನಿಗಳು ಸಹ ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಿದ್ದವು.
ಖಾಸಗಿ ಬಸ್ ದರ ಏರಿಕೆ: ದಾಳಿ ಗೌರಿ–ಗಣೇಶ ಹಬ್ಬಗಳ ಪ್ರಯುಕ್ತ ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಇಲಾಖೆ ದಾಳಿ ಮಾಡಿದೆ. 497 ಬಸ್‌ಗಳಿಗೆ ₹ 5.51ಲಕ್ಷ ದಂಡ ವಿಧಿಸಿದೆ. ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿದ್ದು ಭಾನುವಾರ ರಾತ್ರಿವರೆಗೆ 1000ಕ್ಕೂ ಅಧಿಕ ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ಅಧಿಕ ಟಿಕೆಟ್ ದರ ವಿಧಿಸುತ್ತಿದ್ದ ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ತಿಳಿಸಿದ್ದಾರೆ. ಜಂಟಿ ಸಾರಿಗೆ ಆಯುಕ್ತರ ನೇತೃತ್ವದಲ್ಲಿ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆದಿದೆ. ಇನ್ನೆರಡು ದಿನ ಪರಿಶೀಲನೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.