ಗಣೇಶನ ಮೂರ್ತಿಗಳು (ಸಾಂದರ್ಭಿಕ ಚಿತ್ರ)
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ತಯಾರಿಸುವ ಮೂರ್ತಿಗಳಲ್ಲಿ ಪರಿಸರಕ್ಕೆ ಮಾರಕವಾದ ರಾಸಾಯನಿಕ ಬಳಕೆ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲು ಬಿಬಿಎಂಪಿ ನಿರ್ಧರಿಸಿದೆ.
ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ನಡೆಸಲು ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.
ಹಬ್ಬಕ್ಕೆ ಸಂಬಂಧಿಸಿದಂತೆ ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭವಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಬಳಕೆಯನ್ನು ನಿರ್ಬಂಧಿಸಬೇಕು. ಇಂಥ ಮೂರ್ತಿಗಳು ಕಂಡು ಬಂದರೆ ವಶಪಡಿಸಿಕೊಂಡು, ತಯಾರಿಸಿದವರ, ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ದಂಡ ವಿಧಿಸಲು ನಿರ್ಧರಿಸಲಾಯಿತು.
ತೀರ್ಮಾನಗಳು?
ವಶಪಡಿಸಿಕೊಳ್ಳಲಾದ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಬಕೆಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಅದರ ಮಣ್ಣನ್ನು ಕೈತೋಟಗಳಿಗೆ, ಹೂವಿನ ಕುಂಡಗಳಿಗೆ ಬಳಸಲು ಅರಿವು ಮೂಡಿಸಬೇಕು.
ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ವಿಸರ್ಜನೆ ಸ್ಥಳಗಳನ್ನು ಗುರುತಿಸಿ, ಸ್ಥಳಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸಬೇಕು. ಪಾಲಿಕೆ ವ್ಯಾಪ್ತಿಯ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಸಮೀಪದಲ್ಲಿ ತಾತ್ಕಾಲಿಕವಾಗಿ ವಿಸರ್ಜನಾ ಸ್ಥಳಗಳನ್ನು ಗುರುತಿಸಬೇಕು.
ವಲಯ ಆಯುಕ್ತರು, ವಲಯಕ್ಕೆ ಒಬ್ಬರನ್ನು ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ, ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ದಂಡ ವಿಧಿಸಬೇಕು ಎಂದು ತೀರ್ಮಾನಿಸಲಾಯಿತು.
75 ಏಕಗವಾಕ್ಷಿ ಕೇಂದ್ರ ಸ್ಥಾಪನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಅನುಮತಿ ನೀಡಲು 75 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಬಿಎಂಪಿ ಪೊಲೀಸ್ ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಒಂದೇ ಸ್ಥಳದಲ್ಲಿದ್ದು ಅನುಮತಿ ಪತ್ರವನ್ನು ನೀಡಲಿದ್ದಾರೆ ಎಂದು ಮಹೇಶ್ವರ ರಾವ್ ಮಾಹಿತಿ ನೀಡಿದರು. ಸಾರ್ವಜನಿಕವಾಗಿ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು ನೋಡಲ್ ಅಧಿಕಾರಿಗಳಾಗಿ ನೇಮಿಸಲಾದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.