ADVERTISEMENT

ಗಂಗಾ ಕಲ್ಯಾಣ: ತನಿಖೆಗೆ ಸದನ ಸಮಿತಿ

ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 22:46 IST
Last Updated 23 ಸೆಪ್ಟೆಂಬರ್ 2020, 22:46 IST

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆದ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಸದನ ಸಮಿತಿ ರಚಿಸಲು ಸರ್ಕಾರ ಸಿದ್ಧವಿದೆ’ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಈ ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದ್ದು ಸದನ ಸಮಿತಿ ರಚಿಸುವಂತೆ ಆಗ್ರಹಿಸಿದರು. ಪಕ್ಷಾತೀತವಾಗಿ ಎಲ್ಲ ಸದಸ್ಯರು ಬೆಂಬಲ ಸೂಚಿಸಿದರು.

ನಾರಾಯಣಸ್ವಾಮಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಅಂಬೇಡ್ಕರ್‌, ಮಹರ್ಷಿ ವಾಲ್ಮೀಕಿ, ಬಂಜಾರ ಹೀಗೆ ವಿವಿಧ ಅಭಿವೃದ್ಧಿ ನಿಗಮಗಳ ಸಹಾಯಧನದಲ್ಲಿ 2016ರ–19ರ ಅವಧಿಯಲ್ಲಿ 31,735 ಕೊಳವೆಬಾವಿ ಕೊರೆಯಲಾಗಿದೆ. ಶಾಸಕರ ನೇತೃತ್ವದ ಸಮಿತಿಯ ಕೋಟಾ ಅಡಿ ಶೇ 80, ಉಳಿದ ಶೇ 20ರಲ್ಲಿ, ಶೇ 15ರಷ್ಟು ಸಚಿವರಿಗೆ, ಶೇ 5ರಷ್ಟು ಮಂಡಳಿಗಳ ವಿವೇಚಾನಾಧಿಕಾರಕ್ಕೆ ನೀಡಲಾಗಿದೆ. ಆದರೆ, ಟೆಂಡರ್‌ ಕರೆಯದೆ ಕಾಮಗಾರಿಗೆ ಪರವಾನಗಿ ನೀಡಲಾಗಿದೆ. ಬೋಗಸ್‌ ಬಿಲ್‌ ನೀಡಿ ಹಣ ಲೂಟಿ ಮಾಡಲಾಗಿದೆ’ ಎಂದರು.

ADVERTISEMENT

ಯೋಜನೆಯಲ್ಲಿ ನಡೆದ ಅಕ್ರಮಗಳನ್ನು ಸದಸ್ಯರಾದ ಅಪ್ಪಾಜಿ ಗೌಡ, ಬಸವರಾಜ ಇಟಗಿ, ಪ್ರಕಾಶ್ ರಾಥೋಡ್, ಮಹಂತೇಶ ಕವಟಗಿಮಠ, ಮರಿತಿಬ್ಬೇಗೌಡ, ರವಿಕುಮಾರ್, ತೇಜಸ್ವಿನಿ ಗೌಡ, ಸುನೀಲ್ ವಲ್ಯಾಪುರೆ, ಧರ್ಮಸೇನಾ, ನಜೀರ್ ಅಹಮದ್ ಹೀಗೆ ಎಲ್ಲ ಸದಸ್ಯರು ವಿವರಿಸಿದರು.

ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘ಈ ಮೋಸ ಅಕ್ಷಮ್ಯ. ಮಟ್ಟ ಹಾಕಲೇಬೇಕು. ಸದನ ಸಮಿತಿ ಮೂಲಕ ವ್ಯವಹಾರದ ತನಿಖೆ ಆಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.