ADVERTISEMENT

ಗಾಂಜಾ ಮಾರುತ್ತಿದ್ದ ಆಂಧ್ರ ಗ್ಯಾಂಗ್ ಸೆರೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:24 IST
Last Updated 16 ಜುಲೈ 2021, 17:24 IST
ಗಾಂಜಾ–ಸಾಂದರ್ಭಿಕ ಚಿತ್ರ
ಗಾಂಜಾ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಎಂ. ಸೇಮಂತ್ (32), ಸಿದಾರಿ ಬೊಂಜಿ ಬಾಬು ಅಲಿಯಾಸ್ ಫಿಲಿಪ್‌ (23), ವಂತಲ್ ನಾಗೇಶ್ (30) ಹಾಗೂ ಸಿದಾರಿ ಮಹೇಶ್ (22) ಬಂಧಿತರು. ಅವರಿಂದ 134 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿ ಅಂಚಟ್ಟಿ ಗೋವಿಂದ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶದಲ್ಲಿ ಗಾಂಜಾ ಖರೀದಿಸುತ್ತಿದ್ದ ಆರೋಪಿಗಳು, ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು. ಇಲ್ಲಿಯ ವಸತಿಗೃಹವೊಂದರಲ್ಲಿ ಗಾಂಜಾ ಸಂಗ್ರಹಿಸಿಡುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿ ಉದ್ಯೋಗಿಗಳು ಹಾಗೂ ಇತರರಿಗೆ ಗಾಂಜಾ ಮಾರುತ್ತಿದ್ದರು.’

ADVERTISEMENT

’ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಯಿತು. ಇತ್ತೀಚೆಗೆ ಆಂಧ್ರದಿಂದ ಗಾಂಜಾ ತಂದಿದ್ದ ಆರೋಪಿಗಳು, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ನೈಸ್ ರಸ್ತೆ ಟೋಲ್‌ ಬಳಿ ಗುರುವಾರ ಮಾರಾಟ ಮಾಡುತ್ತಿದ್ದರು. ದಾಳಿ ಮಾಡಿ ಗಾಂಜಾ ಜಪ್ತಿ ಮಾಡಲಾಯಿತು. ಆರೋಪಿ ಸೇಮಂತ್ ಸಿಕ್ಕಿಬಿದ್ದ. ಇನ್ನೊಬ್ಬ ಆರೋಪಿ ಅಂಚಟ್ಟಿ ಗೋವಿಂದ್ ತಪ್ಪಿಸಿಕೊಂಡ’ ಎಂದೂ ಪೊಲೀಸರು ತಿಳಿಸಿದರು.

ವಸತಿಗೃಹದಲ್ಲಿ ಗಾಂಜಾ: ‘ಸೇಮಂತ್ ನೀಡಿದ್ದ ಮಾಹಿತಿ ಆಧರಿಸಿ ಬನ್ನೇರುಘಟ್ಟ ರಸ್ತೆಯ ಕೋಳಿಫಾರಂ ಗೇಟ್ ಬಳಿಯ ‘ದಿ ಪಾರ್ಕ್ ಇನ್‌ ಹೋಟೆಲ್ ಮತ್ತು ವಸತಿಗೃಹ’ ಮೇಲೆ ದಾಳಿ ಮಾಡಲಾಯಿತು. ಗಾಂಜಾ ಸಮೇತ ಮೂವರು ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶದ ನಿವಾಸಿಗಳಾದ ಆರೋಪಿಗಳು, ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಗಾಂಜಾ ಮಾರುತ್ತಿದ್ದರು. ಗ್ಯಾಂಗ್‌ನಲ್ಲಿರುವ ಹಲವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.